ಜಾತಿ-ಧರ್ಮ ಮೀರಿದ ಅಪರೂಪದ ಸ್ನೇಹ: ಆರ್‌ಟಿಐ ಕಾರ್ಯಕರ್ತ ಶಾರಿಕ್ ಅಂತಿಮ ಯಾತ್ರೆಯಲ್ಲಿ ಸೌಹಾರ್ದತೆ ಮೆರೆದ ಗೆಳೆಯ ಅಶೋಕ್ ಎಡಮಲೆ

News

Sullia (ಮೊಗರ್ಪಣೆ): ಜಾತಿ-ಧರ್ಮಗಳ ಎಲ್ಲೆಯನ್ನು ಮೀರಿದ ನಿಜವಾದ ಸ್ನೇಹ ಮತ್ತು ಸೌಹಾರ್ದತೆಗೆ ಸುಳ್ಯದ ಮೊಗರ್ಪಣೆಯಲ್ಲಿ ಇಂದು ಅಪರೂಪದ ಕ್ಷಣವೊಂದು ಸಾಕ್ಷಿಯಾಯಿತು.

ಮಾಹಿತಿ ಹಕ್ಕು (RTI) ಕಾರ್ಯಕರ್ತರಾಗಿದ್ದ ಶಾರಿಕ್ ಅವರು ನಿಧನರಾಗಿದ್ದು, ಅವರ ಅಂತಿಮ ವಿಧಿವಿಧಾನಗಳು ಮೊಗರ್ಪಣೆ ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ ನೆರವೇರಿದವು. ಸಮಾಜಮುಖಿ ಚಿಂತನೆ ಹಾಗೂ ಆರ್‌ಟಿಐ ಹೋರಾಟಗಳಲ್ಲಿ ಶಾರಿಕ್ ಅವರೊಂದಿಗೆ ಹೆಜ್ಜೆ ಹಾಕಿದ್ದ, ಅದೇ ಮನಸ್ಥಿತಿಯ ಆಪ್ತ ಗೆಳೆಯ ಅಶೋಕ್ ಎಡಮಲೆ ಅವರು ತಮ್ಮ ಪ್ರೀತಿಯ ಮಿತ್ರನನ್ನು ಕಡೆಯದಾಗಿ ಬೀಳ್ಕೊಡಲು ಮಸೀದಿಗೆ ಆಗಮಿಸಿದ್ದರು.

ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದ್ದ ವೇಳೆ, ಮಸೀದಿಯ ಹೊರಭಾಗದಲ್ಲಿಯೇ ಮೌನವಾಗಿ ಕಾದು ನಿಂತ ಅಶೋಕ್ ಎಡಮಲೆ ಅವರು, ದಫನ್ (ಅಂತ್ಯಕ್ರಿಯೆ) ಕಾರ್ಯ ಸಂಪೂರ್ಣವಾಗಿ ಮುಗಿಯುವವರೆಗೂ ಅಲ್ಲೇ ಇದ್ದು ತಮ್ಮ ಆತ್ಮೀಯ ಗೆಳೆಯನಿಗೆ ಭಾವಪೂರ್ಣ ವಿದಾಯ ಹೇಳಿದರು.

ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯ ಸಂದೇಶ ಸಾರಿದ ಅಶೋಕ್ ಅವರ ಈ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದು, “ನಿಜವಾದ ಸ್ನೇಹಕ್ಕೆ ಯಾವುದೇ ಧರ್ಮದ ಹಂಗಿಲ್ಲ” ಎಂಬುದನ್ನು ಈ ಭಾವುಕ ಕ್ಷಣ ಮತ್ತೊಮ್ಮೆ ಸಾಬೀತುಪಡಿಸಿದೆ. ಅಗಲಿದ ಹೋರಾಟಗಾರ ಶಾರಿಕ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಾರ್ವಜನಿಕರು ಹಾಗೂ ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *