ಕೆಲಸ ಮಾಡಿದರೆ ಕೂಲಿ ಸಿಗಲೇಬೇಕು: ಹನೂರು ಘಟನೆ ಬೆನ್ನಲ್ಲೇ ಅಧಿಕಾರಿಗಳ ಸಭೆ ನಡೆಸಿದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಾಹಿದ್ ತೆಕ್ಕಿಲ್

News

ಚಾಮರಾಜನಗರ: ಹನೂರು ತಾಲೂಕಿನ ಗಂಗನ ದೊಡ್ಡಿ ಗ್ರಾಮದಲ್ಲಿ ನಡೆದ 22 ಬಡ ಕಾರ್ಮಿಕರ ಮೇಲಿನ ಅಮಾನವೀಯ ಅನ್ಯಾಯ ಹಾಗೂ ದುಡಿಸಿಕೊಂಡು ಕೂಲಿ ನೀಡದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ (ಸಚಿವ ದರ್ಜೆ) ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಚಾಮರಾಜನಗರಕ್ಕೆ ಭೇಟಿ ನೀಡಿ ಅಧಿಕಾರಿಗಳ ತುರ್ತು ಸಭೆ ನಡೆಸಿದರು.
ಅಪರ ಜಿಲ್ಲಾಧಿಕಾರಿ ಜವರೇಗೌಡ ಅವರ ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಚಂದ್ರ ಸಮ್ಮುಖದಲ್ಲಿ ನಡೆದ ಈ ಸಭೆಯ ಅಧ್ಯಕ್ಷತೆಯನ್ನು ಟಿ.ಎಂ. ಶಾಹಿದ್ ತೆಕ್ಕಿಲ್ ವಹಿಸಿದ್ದರು.
ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಅಧ್ಯಕ್ಷರು, “ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಅಮಾನವೀಯ ಘಟನೆಗಳು ಹರಿದಾಡಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಈ ವಿಷಯ ಕಾರ್ಮಿಕ ಸಚಿವರ ಗಮನಕ್ಕೆ ಹೋದರೆ ಕರ್ತವ್ಯ ಲೋಪದಡಿ ಅಮಾನತು (Suspension) ಸೇರಿದಂತೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಮುಂದುವರಿದು ಮಾತನಾಡಿದ ಅವರು, “ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಯಾವಾಗಲೂ ಇಂಟೆಕ್, ಬಿಎಂಎಸ್, ಹೆಚ್ ಎಂಎಸ್, ಸಿಐಟಿಯು, ಎಐಟಿಸಿ ಮುಂತಾದ ಕಾರ್ಮಿಕ ಸಂಘಟನೆಗಳ ನಾಯಕರೊಂದಿಗೆ, ಸಂಪರ್ಕದಲ್ಲಿರಬೇಕು. ಪೊಲೀಸ್ ಹಾಗೂ ಕಂದಾಯ ಇಲಾಖೆ ಸಭೆಗಳನ್ನು ನಡೆಸಿ ಪರಿಸ್ಥಿತಿಯನ್ನು ಪರಾಮರ್ಶಿಸಬೇಕು” ಎಂದರು.
“ಕಾರ್ಮಿಕರು ದೇಶದ ಅಥವಾ ರಾಜ್ಯದ ಯಾವುದೇ ಮೂಲೆಯವರಾಗಿರಲಿ, ಅವರು ಮಾಡಿದ ಕೆಲಸಕ್ಕೆ ಕನಿಷ್ಠ ಕೂಲಿ ಸಿಗುತ್ತಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಅಧಿಕಾರಿಗಳ ಜವಾಬ್ದಾರಿ. ಮಾನವೀಯತೆಯ ದೃಷ್ಟಿಯಿಂದ ಪ್ರತಿಯೊಬ್ಬರಿಗೂ ನ್ಯಾಯ ಸಿಗಲೇಬೇಕು”. ಕನಿಷ್ಠ ವೇತನ‌ ನೀಡದಿದ್ದಲ್ಲಿ ಕಾರ್ಮಿಕ ಇಲಾಖೆ ಕೇಸು ದಾಖಲಿಸಬೇಕು, ದೌರ್ಜನ್ಯ ಎಸಗಿದ್ದಲ್ಲಿ ಪೋಲಿಸ್ ಇಲಾಖೆ ಕಠಿಣ ಕ್ರಮ ಜರಗಿಸಬೇಕು ಎಂದು ಅವರು ಕಟ್ಟುನಿಟ್ಟಿನ ಆದೇಶ ನೀಡಿದರು. ಸಭೆಯ ನಂತರ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಲು ತೆರಳಿದರು‌

Leave a Reply

Your email address will not be published. Required fields are marked *