ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರಿಗೆ ವಿಶೇಷ ಪ್ರಶಸ್ತಿ ಪ್ರದಾನ
ಮಂಜೇಶ್ವರ, ಅಕ್ಟೋಬರ್ 24:
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪುವೆಂಪು ಪ್ರತಿಷ್ಠಾನ ಕಾಸರಗೋಡು ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಮಂಜೇಶ್ವರ ಇವುಗಳ ಸಂಯುಕ್ತ ಆಶ್ರಯದಲ್ಲಿ, ತುಳುರತ್ನ, ಬಹುಭಾಷಾ ವಿದ್ವಾಂಸ ಡಾ. ಪಿ. ವೆಂಕಟರಾಜ ಪುಣಿಂಚಿತ್ತಾಯರ ಸ್ಮರಣಾರ್ಥ ಮಂಜೇಶ್ವರದ ಗಿಳಿವಿಂಡುವಿನ ಪಾರ್ಥಿಸುಬ್ಬ ವೇದಿಕೆಯಲ್ಲಿ ‘ಪುವೆಂಪು ನೆನಪು-2026’ ಬೃಹತ್ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ಸಂಭ್ರಮದಿಂದ ಜರುಗಿತು.
ಕರ್ನಾಟಕ ವಿಧಾನ ಪರಿಷತ್ನ ಮಾನ್ಯ ಸಭಾಪತಿಗಳಾದ ಶ್ರೀ ಸಲೀಂ ಅಹಮ್ಮದ್ ಅವರು ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ಗಡಿನಾಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಸಾಹಿತ್ಯಿಕ ಕಾರ್ಯಕ್ರಮಗಳ ಪಾತ್ರ ಹಿರಿದಾದದ್ದು. ವಿಚಾರಧಾರೆಗಳು ಹಾಗೂ ಮಾನವತಾವಾದಿ ಸಂದೇಶಗಳು ಇಂದಿನ ಯುವ ಪೀಳಿಗೆಗೆ ಸದಾ ಸ್ಪೂರ್ತಿದಾಯಕವಾಗಿವೆ. ಗಡಿ ಭಾಗದ ಕನ್ನಡಿಗರ ಧ್ವನಿಯಾಗಿ ಸರ್ಕಾರ ಮತ್ತು ಸಂಸ್ಥೆಗಳು ಸದಾ ಸ್ಪಂದಿಸಲಿವೆ” ಎಂದು ಅಭಿಪ್ರಾಯಪಟ್ಟರು. ಮಂಜೇಶ್ವರ ಶಾಸಕರಾದ ಶ್ರೀ ಎ.ಕೆ.ಎಂ. ಅಶ್ರಫ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದ ಪ್ರಮುಖ ಆಕರ್ಷಣೆಯಾಗಿ ಹಿರಿಯ ಸಾಹಿತಿ, ಸೈದ್ಧಾಂತಿಕ ಚಿಂತಕ ಹಾಗೂ ಚಲನಚಿತ್ರ ನಿರ್ದೇಶಕರಾದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರಿಗೆ ವಿಶೇಷ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್ನ ಅಧ್ಯಕ್ಷರಾದ ಡಾ. ಎಂ. ವೀರಪ್ಪ ಮೊಯ್ಲಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಡಾ. ಬರಗೂರು ಅವರ ಸಾಹಿತ್ಯಿಕ ಕೊಡುಗೆಯನ್ನು ಸ್ಮರಿಸಲಾಯಿತು. ವಾಸ್ತವವಾದಿ ನೆಲೆಗಟ್ಟಿನಲ್ಲಿ ತಮ್ಮ ಸೈದ್ಧಾಂತಿಕ ಚಿಂತನೆಗಳನ್ನು ನಾಡಿನಾದ್ಯಂತ ಬಿತ್ತಿ ಬೆಳೆದಿರುವ ಅವರು, ಕನ್ನಡ ನಾಡು ಕಂಡ ಅಪ್ರತಿಮ ಚಿಂತಕ, ಸಾಧಕ ಹಾಗೂ ಬೋಧಕರಾಗಿದ್ದಾರೆ. ತುಮಕೂರು ಮತ್ತು ಬೆಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಅವರು, ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮಹತ್ವದ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಅವರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಸೇರಿದಂತೆ ಹಲವು ರಾಷ್ಟ್ರೀಯ-ಅಂತರರಾಷ್ಟ್ರೀಯ ಪ್ರಶಸ್ತಿಗಳು ಹಾಗೂ ನಾಲ್ಕು ಗೌರವ ಡಾಕ್ಟರೇಟ್ಗಳಿಗೆ ಭಾಜನರಾಗಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ’ ಗೌರವ ಪಡೆದಿರುವ ಇವರ ‘ಶಾಂತಿ’ ಚಲನಚಿತ್ರವು ಗಿನ್ನೆಸ್ ವಿಶ್ವದಾಖಲೆಯನ್ನು ನಿರ್ಮಿಸಿದೆ.
ಕಾರ್ಯಕ್ರಮದ ಕುರಿತು ಮಾತನಾಡಿದ ಡಾ. ಎಂ. ವೀರಪ್ಪ ಮೊಯ್ಲಿ ಅವರು, ಗಡಿನಾಡಿನಲ್ಲಿ ಇಂತಹ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವುದು ಕನ್ನಡ ಭಾಷೆ ಮತ್ತು ಸಾಹಿತ್ಯದ ಬೇರುಗಳನ್ನು ಗಟ್ಟಿಗೊಳಿಸಲು ಅತ್ಯಂತ ಅವಶ್ಯಕ ಎಂದು ಅಭಿಪ್ರಾಯಪಟ್ಟರು. ಕುವೆಂಪು ಅವರ ವಿಶ್ವಮಾನವ ಸಂದೇಶ ಮತ್ತು ವಿಚಾರಧಾರೆಯನ್ನು ಇಂದಿನ ಯುವ ಜನತೆಗೆ ತಲುಪಿಸುವಲ್ಲಿ ಇಂತಹ ವೇದಿಕೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಮುಖ ಘಟ್ಟದಲ್ಲಿ ದುಬೈನ ಲೇಖಕರಾದ ಶ್ರೀ ಶಾಫಿ ಬಂದ್ವಾರ ಅವರ ‘ಹೃದಯಗೀತೆ’ ಕೃತಿಯನ್ನು ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ (ಸಚಿವ ದರ್ಜೆ) ಶ್ರೀ ಟಿ.ಎಂ. ಶಹೀದ್ ತೆಕ್ಕಿಲ್ ಬಿಡುಗಡೆಗೊಳಿಸಿದರು. ಕೃತಿ ಪರಿಚಯವನ್ನು ಶ್ರೀ ಎಂ.ಎಸ್. ಥೋಮಸ್ ಡಿಸೋಜ ನೆರವೇರಿಸಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇವಿನಮರ, ಪುವೆಂಪು ಪ್ರತಿಷ್ಠಾನ ಕಾಸರಗೋಡು ಇದರ ಅಧ್ಯಕ್ಷ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಸೇರಿದಂತೆ ಗಡಿನಾಡಿನ ಹಾಗೂ ಕರ್ನಾಟಕದ ಹಲವು ಗಣ್ಯ ಸಾಹಿತಿಗಳು, ಕವಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಬೆಳಗ್ಗೆಯಿಂದಲೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕುವೆಂಪು ವಿರಚಿತ ಹಾಡಿನ ನೃತ್ಯ ವೈಭವ (‘ಕಣ್ಣೆ ತಂಡ, ಸೂರಂಜಲು’) ಹಾಗೂ ನಾನಾ ಕಲಾ ಪ್ರಕಾರಗಳ ಪ್ರದರ್ಶನವು ಸಭಿಕರನ್ನು ಮಂತ್ರಮುಗ್ಧಗೊಳಿಸಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ಜರುಗಿದ ಈ ಕಾರ್ಯಕ್ರಮವು ಗಡಿನಾಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸೊಗಡನ್ನು ಮತ್ತೊಮ್ಮೆ ಗಟ್ಟಿಗೊಳಿಸಿತು.
