ಸುಳ್ಯದ ಪ್ರಮುಖ ಹಾಗೂ ಹಿರಿಯ ಪತ್ರಕರ್ತರಲ್ಲೊಬ್ಬರಾದ ಜೆ.ಕೆ. ರೈ (ಜಯಕೃಷ್ಣ ರೈ) ಅವರು ಅಕ್ಟೋಬರ್ 31 ರ ರಾತ್ರಿ 11 ಗಂಟೆಗೆ ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು.
ನಿವೃತ್ತ ಫಾರೆಸ್ಟರ್, ಸುಳ್ಯದ ಗಾಂಧಿನಗರ ನಿವಾಸಿ ನಾರಾಯಣ ರೈ ಹಾಗೂ ಡಿ. ಕಮಲ ರೈ ದಂಪತಿಯ ಎರಡನೇ ಪುತ್ರರಾದ ಜಿ.ಕೆ. ರೈ ಅವರು ಕಳೆದ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಆರೋಗ್ಯ ಕ್ಷೀಣಿಸುತ್ತಾ ಬಂದು ಉಸಿರಾಟದ ತೊಂದರೆಗೊಳಗಾಗಿ ಅ. 28 ರಂದು ಕೆ.ವಿ.ಜಿ. ಆಸ್ಪತ್ರೆಗೆ ದಾಖಲಾಗಿದ್ದರು. ಕೃತಕ ಉಸಿರಾಟದ ವ್ಯವಸ್ಥೆಗೊಳಪಡಿಸಲ್ಪಟ್ಟಿದ್ದ ಅವರನ್ನು ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ, ಆಲೆಟ್ಟಿ ನಾರ್ಕೋಡು ಅವರ ಮನೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ರಾತ್ರಿ 11 ಗಂಟೆಗೆ ಅವರು ಕೊನೆಯುಸಿರೆಳೆದರು.
ಪತ್ರಕರ್ತರಾಗಿ ಮತ್ತು ಸಮಾಜ ಸೇವಕರಾಗಿ ಸೇವೆ: ಪಿ.ಯು. ಶಿಕ್ಷಣ ಮುಗಿದ ಕೂಡಲೇ ಫೋಟೋಗ್ರಾಫರ್ ಆಗಬೇಕೆಂಬ ಇಚ್ಛೆಯಿಂದ ಕ್ಯಾಮೆರಾ ಖರೀದಿಸಿದ್ದ ಜಿ.ಕೆ. ರೈ ಅವರು 1991 ರಲ್ಲಿ ಸುಳ್ಯದಲ್ಲಿ ನಡೆದ ಕೋಮುಗಲಭೆಯ ಸಂದರ್ಭ ಫೋಟೋಗ್ರಾಫರ್ ಆಗಿ ಮುನ್ನೆಲೆಗೆ ಬಂದಿದ್ದರು. ‘ಸುದ್ದಿ ಪತ್ರಿಕೆ’ಯ ಫೋಟೋ ಜರ್ನಲಿಸ್ಟ್ ಆಗಿ ಹಾಗೂ ವೃತ್ತಿಪರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದರು. ‘ಚೈತ್ರ ಡ್ರೈವಿಂಗ್ ಸ್ಕೂಲ್’ ಎಂಬ ವಾಹನ ಚಾಲನಾ ತರಬೇತಿ ಕೇಂದ್ರವನ್ನು ಆರಂಭಿಸಿ ಮುನ್ನಡೆಸುತ್ತಿದ್ದರು. ಬಳಿಕ ಸಂಜೆ ಪತ್ರಿಕೆಯೊಂದರ ವರದಿಗಾರರಾಗಿ, ಅಬ್ದುಲ್ ಸತ್ತಾರ್ ಗೋರೆಡ್ಕರವರ ಮರಣಾನಂತರ ಪಯಸ್ವಿನಿ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ಸುಳ್ಯದಲ್ಲಿ ಪ್ರಥಮ ಬಾರಿಗೆ ಪತ್ರಕರ್ತರ ಸಂಘ ಸ್ಥಾಪನೆಯಾದಾಗ ಅದರ ಮೊದಲ ಅಧ್ಯಕ್ಷರಾಗಿದ್ದ ಅವರು, ನಂತರ ಸುಳ್ಯ ಪ್ರೆಸ್ ಕ್ಲಬ್ ರಚನೆಯಾದಾಗಲೂ ಅದರ ಅಧ್ಯಕ್ಷರಾಗಿದ್ದರು.
ಕುಟುಂಬ ವರ್ಗ: ಮೃತರು ಪತ್ನಿ ಶ್ರೀಮತಿ ಜಯಲಕ್ಷ್ಮಿ, ಪುತ್ರಿ ಕು. ಶಮಿತಾ ರೈ (ಸಾಫ್ಟ್ವೇರ್ ಇಂಜಿನಿಯರ್), ಪುತ್ರ ಪ್ರಮಿತ್ ರೈ (ಸೈಂಟ್ ಜೋಸೆಫ್ ಹೈಸ್ಕೂಲ್ 8ನೇ ತರಗತಿ ವಿದ್ಯಾರ್ಥಿ), ತಂದೆ ನಾರಾಯಣ ರೈ, ಅಣ್ಣ ಸುಳ್ಯ ಲೈನ್ಸ್ ಮಾಜಿ ಅಧ್ಯಕ್ಷ ರಾಮಕೃಷ್ಣ ರೈ, ಹಾಗೂ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಹರಿಕೃಷ್ಣ ರೈ ಹಾಗೂ ಬಂಧುಗಳನ್ನು ಅಗಲಿದ್ದಾರೆ.
ಅಂತ್ಯಸಂಸ್ಕಾರ: ಜಿ.ಕೆ. ರೈ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವು ನಾಳೆ ಬೆಳಗ್ಗೆ 10 ಗಂಟೆಗೆ ಕೊಡಿಯಾಲಬೈಲ್ ಮುಕ್ತಿಧಾಮದಲ್ಲಿ ನೆರವೇರಲಿದೆ ಎಂದು ಮನೆಯವರು ತಿಳಿಸಿದ್ದಾರೆ.
