ಕಂದಾಯ ಇಲಾಖೆಯಿಂದ ಹೆಚ್ಚುವರಿ ಸರ್ವೇಯರ್ಗಳ ನೇಮಕಕ್ಕೆ ಒತ್ತಾಯ
ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಅರಣ್ಯ ಪ್ರದೇಶದ ಸುಮಾರು 45 ಶೇಕಡಾ ಭಾಗ ಸುಳ್ಯ ತಾಲೂಕಿನಲ್ಲಿ ಇದ್ದು, ಸುಳ್ಯ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿಯೂ ಬರುತ್ತದೆ. ಇದರಿಂದ ತಾಲೂಕಿನ ಜನರು ಅರಣ್ಯ ಭೂಮಿ, ಕಂದಾಯ ಭೂಮಿ ಹಾಗೂ ಅರಣ್ಯ ಇಲಾಖೆಯ ವಿವಿಧ ನಿಯಮಗಳಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಅರಣ್ಯ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತಂದಾಗ ಅರಣ್ಯ ಬಫರ್ ವಲಯ, ಸಾಮಾಜಿಕ ಅರಣ್ಯ ಸೇರಿದಂತೆ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಸಮಸ್ಯೆಗಳನ್ನು ಪರಿಹರಿಸಲು ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿಯ ವಾಸ್ತವಿಕ ಗಡಿ ಮತ್ತು ಸ್ವರೂಪವನ್ನು ಸ್ಪಷ್ಟಪಡಿಸುವುದು ಅತ್ಯಂತ ಅಗತ್ಯವಾಗಿದೆ.
ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಂಟಿ ಸರ್ವೆ ನಡೆಸುವುದೊಂದೇ ಪರಿಣಾಮಕಾರಿ ಮಾರ್ಗವಾಗಿದೆ. ಆದ್ದರಿಂದ ಸುಳ್ಯ ಸೇರಿದಂತೆ ಜಿಲ್ಲೆಯ ಬಾಕಿ ಇರುವ ಪ್ರದೇಶಗಳಲ್ಲಿ ಜಂಟಿ ಸರ್ವೆ ಕಾರ್ಯವನ್ನು ತ್ವರಿತವಾಗಿ ಕೈಗೊಂಡು ಪೂರ್ಣಗೊಳಿಸಬೇಕು ಎಂದು ಅರಣ್ಯ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಜಂಟಿ ಸರ್ವೆ ಕಾರ್ಯಕ್ಕೆ ಕಂದಾಯ ಇಲಾಖೆಯಿಂದ ಅಗತ್ಯವಿರುವಷ್ಟು ಹೆಚ್ಚುವರಿ ಸರ್ವೇಯರ್ಗಳನ್ನು ನೇಮಿಸಿ, ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸರ್ವೆ ಕಾರ್ಯವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಮನವಿ ಮಾಡಲಾಗಿದೆ.
ಜಂಟಿ ಸರ್ವೆ ಪೂರ್ಣಗೊಂಡ ಬಳಿಕ ಅರಣ್ಯ ಭೂಮಿ, ಕಂದಾಯ ಭೂಮಿ ಹಾಗೂ ಇತರ ವರ್ಗೀಕರಣಗಳ ಕುರಿತು ಸ್ಪಷ್ಟತೆ ದೊರೆಯಲಿದ್ದು, ಹಲವು ವರ್ಷಗಳಿಂದ ಸಾರ್ವಜನಿಕರು ಎದುರಿಸುತ್ತಿರುವ ಭೂಮಿ ಸಂಬಂಧಿತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
