ಸುಳ್ಯ: ಮೇಯಲು ಬಿಟ್ಟಿದ್ದ ದನಗಳ ಕಳ್ಳತನಕ್ಕೆ ಯತ್ನ; ಇಬ್ಬರ ಸೆರೆ, ಕೇರಳಕ್ಕೆ ಸಾಗಿಸಲು ಸಂಚು!

News

ಸುಳ್ಯದ ಗಾಂಧಿನಗರದಲ್ಲಿ ಮೇಯಲು ಬಿಟ್ಟಿದ್ದ ಜಾನುವಾರುಗಳನ್ನು ಕಳ್ಳತನ ಮಾಡಿ ಕೇರಳ ರಾಜ್ಯಕ್ಕೆ ಸಾಗಿಸಲು ಯತ್ನಿಸಿದ ಇಬ್ಬರನ್ನು ಸುಳ್ಯ ಪೊಲೀಸರು ನವೆಂಬರ್ 18ರ ಮುಂಜಾನೆ ಯಶಸ್ವಿಯಾಗಿ ಬಂಧಿಸಿದ್ದಾರೆ. ಏಣಾವರದ ಹಾಕಿರ್.ಎ (28) ಹಾಗೂ ಅರಂಬೂರಿನ ಸಂಶುದ್ದೀನ್.ಎಸ್.ಎಂ. (25) ಬಂಧಿತ ಆರೋಪಿಗಳಾಗಿದ್ದಾರೆ.

ಗಾಂಧಿನಗರ ಶಾಲೆಯ ಮೈದಾನದಲ್ಲಿ ಇಬ್ಬರು ವ್ಯಕ್ತಿಗಳು ಜಾನುವಾರುಗಳ ಕುತ್ತಿಗೆಗೆ ಹಗ್ಗ ಕಟ್ಟಿ, ಮೈದಾನದಲ್ಲಿದ್ದ ಕಂಬಕ್ಕೆ ಕಟ್ಟಿಹಾಕಿ ಕಳ್ಳತನ ಮಾಡಿ ಕೇರಳ ರಾಜ್ಯಕ್ಕೆ ಸಾಗಿಸಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸುಳ್ಯ ಪೊಲೀಸ್ ಠಾಣೆಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಠಾಣಾ ಪಿ.ಎಸ್.ಐ. ಉದಯರವಿ ಅವರ ನೇತೃತ್ವದ ಪೊಲೀಸರ ತಂಡ ನವೆಂಬರ್ 18ರ ಬೆಳಿಗ್ಗೆ 04:30 ಗಂಟೆಗೆ ಗಾಂಧಿನಗರ ಶಾಲಾ ಮೈದಾನದ ಬಳಿ ದಾಳಿ ನಡೆಸಿತು. ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ಸ್ಥಳದಲ್ಲೇ ಬೆನ್ನಟ್ಟಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ವಿಚಾರಣೆ ನಡೆಸಿದಾಗ, ಜಾನುವಾರುಗಳನ್ನು ಕಳವು ಮಾಡಿ ಕೇರಳಕ್ಕೆ ಸಾಗಿಸಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಈ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಕಳ್ಳತನಕ್ಕೆ ಕೇರಳದ ರಂಶಿ ಎಂಬಾತನ ಸಹಕಾರವಿರುವುದು ತಿಳಿದುಬಂದಿದ್ದು, ಆತನ ಮೇಲೂ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಕೃತ್ಯಕ್ಕೆ ಬಳಸಿದ ₹30,000 ಮೌಲ್ಯದ ದ್ವಿಚಕ್ರ ವಾಹನ ಹಾಗೂ ಒಟ್ಟು ₹4,000 ಮೌಲ್ಯದ ಎರಡು ಗಂಡು ಕರುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *