ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸುತ್ತಿದ್ದಾರೆ. ಅಂತಹುದೇ ಒಂದು ಸ್ಪೂರ್ತಿದಾಯಕ ಕಥೆಯನ್ನು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ತನ್ವಿ ಶೆಟ್ಟಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಐಟಿ ಉದ್ಯೋಗಿಯಾಗಿದ್ದ ಅಪರ್ಣಾ ಎಂಬ ಮಹಿಳೆ, ಪರಿಸ್ಥಿತಿಯ ಒತ್ತಡ ಹಾಗೂ ಆರೋಗ್ಯದ ದೃಷ್ಟಿಯಿಂದ ಆಟೋ ಸ್ಟೀರಿಂಗ್ ಹಿಡಿದ ಕಥೆ ಇದೀಗ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಘಟನೆಯ ವಿವರ: ತನ್ವಿ ಶೆಟ್ಟಿ ಇತ್ತೀಚೆಗೆ ರ್ಯಾಪಿಡೋ ಮೂಲಕ ಆಟೋ ಬುಕ್ ಮಾಡಿದ್ದರು. ಆಗ ಆಟೋ ಚಾಲನೆ ಮಾಡಿಕೊಂಡು ಬಂದ ಮಹಿಳೆ ಅಪರ್ಣಾ ಅವರು ಇಂಗ್ಲಿಷ್ನಲ್ಲಿ ಒಟಿಪಿ ಕೇಳಿದಾಗ ತನ್ವಿಯವರಿಗೆ ಆಶ್ಚರ್ಯ ಹಾಗೂ ಕುತೂಹಲ ಮೂಡಿದೆ. ಬಳಿಕ ಪ್ರಯಾಣದ ವೇಳೆ ಅಪರ್ಣಾ ಅವರ ಜೀವನದ ಹಾದಿಯನ್ನು ತನ್ವಿ ವಿಡಿಯೋ ಮೂಲಕ ಹೊರತಂದಿದ್ದಾರೆ.
ಐಟಿ ಉದ್ಯೋಗ ಬಿಡಲು ಕಾರಣವೇನು? ಅಪರ್ಣಾ ಈ ಮೊದಲು ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅಲ್ಲಿ ಸತತವಾಗಿ ನೈಟ್ ಶಿಫ್ಟ್ (ರಾತ್ರಿ ಪಾಳಿ) ಇರುತ್ತಿತ್ತು. ಇತ್ತೀಚೆಗೆ ತಂದೆ ನಿಧನರಾಗಿದ್ದರಿಂದ ಮನೆಯಲ್ಲಿ ತಾಯಿ ಒಬ್ಬರೇ ಇರುತ್ತಿದ್ದರು. ರಾತ್ರಿ ವೇಳೆಯಲ್ಲಿ ತಾಯಿಯನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಲು ಸಾಧ್ಯವಾಗದೆ ಅವರು ಸಂಕಷ್ಟಕ್ಕೊಳಗಾಗಿದ್ದರು. ಜೊತೆಗೆ ನಿರಂತರ ಶಿಫ್ಟ್ ಬದಲಾವಣೆ, ಒತ್ತಡ ಮತ್ತು ನಿದ್ರಾಹೀನತೆಯಿಂದಾಗಿ ಅವರಿಗೆ ‘ಪಿಸಿಒಡಿ’ (PCOD) ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡವು.
ಆಟೋ ಚಾಲನೆಯಲ್ಲಿ ಸ್ವಾತಂತ್ರ್ಯ ಮತ್ತು ನೆಮ್ಮದಿ: ಕಡಿಮೆ ವೇತನ ಮತ್ತು ಕಠಿಣ ಕೆಲಸದ ಸಮಯವಿದ್ದ ಐಟಿ ಕೆಲಸಕ್ಕಿಂತ ಆಟೋ ಚಾಲನೆಯೇ ಉತ್ತಮ ಆದಾಯ ತಂದುಕೊಡುತ್ತಿದೆ ಎಂದು ಅಪರ್ಣಾ ಹೇಳಿದ್ದಾರೆ. ಜೊತೆಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸದ ಸಮಯವನ್ನು ನಿರ್ಧರಿಸುವ ಸ್ವಾತಂತ್ರ್ಯವೂ ಸಿಕ್ಕಿದೆ. ಆರಂಭದಲ್ಲಿ ಮನೆಯವರು ಮತ್ತು ಸಮಾಜದ ಕೆಲವರು ವಿರೋಧ ವ್ಯಕ್ತಪಡಿಸಿದರೂ, ಆಕೆ ಧೃತಿಗೆಡದೆ ಈ ವೃತ್ತಿಯನ್ನು ಆಯ್ದುಕೊಂಡಿದ್ದಾರೆ. ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಚಲಾಯಿಸುವಾಗ ಪುರುಷರು ಮತ್ತು ಸಾರ್ವಜನಿಕರಿಂದ ಉತ್ತಮ ಬೆಂಬಲ ಹಾಗೂ ಪ್ರೋತ್ಸಾಹ ಸಿಗುತ್ತಿದೆ ಎಂದು ಅಪರ್ಣಾ ಸಂತಸ ಹಂಚಿಕೊಂಡಿದ್ದಾರೆ.
ಸ್ವಾವಲಂಬಿ ಬದುಕಿಗೆ ಯಾವುದೇ ಕೆಲಸ ಕೀಳಲ್ಲ ಎಂಬುದನ್ನು ಸಾಬೀತುಪಡಿಸಿದ ಅಪರ್ಣಾ ಅವರ ಈ ಧೈರ್ಯಕ್ಕೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
