ಮಂಗಳೂರು: ನೆಹರು ಮೈದಾನದಲ್ಲಿ ವಿಜೃಂಭಣೆಯಿಂದ ಜರುಗಿದ 71ನೇ ಕನ್ನಡ ರಾಜ್ಯೋತ್ಸವ

News

ಮಂಗಳೂರು: ಮಂಗಳೂರಿನ ಐತಿಹಾಸಿಕ ನೆಹರು ಮೈದಾನದಲ್ಲಿ ವಿಜೃಂಭಣೆಯಿಂದ ಜರುಗಿದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ವಹಿಸಿ ಮಾತನಾಡಿದರು.

ಕನ್ನಡವೆಂದರೆ ಕೇವಲ ಒಂದು ಭಾಷೆಯ ಹೆಸರಲ್ಲ, ಅದೊಂದು ಮಂತ್ರ ಹಾಗೂ ಮಹಾಶಕ್ತಿ ಎಂದು ಅವರು ಬಣ್ಣಿಸಿದರು. ಕನ್ನಡ ನಮ್ಮ ಅಸ್ಮಿತೆ ಮಾತ್ರವಲ್ಲದೆ, ಈ ಮಣ್ಣಿನ ಕಂಪು ಹಾಗೂ ಬದುಕಿನ ಪ್ರತಿ ಹೆಜ್ಜೆಯಲ್ಲೂ ಬೆಸೆದುಕೊಂಡಿರುವ ಆತ್ಮೀಯತೆಯ ನಂಟಾಗಿದೆ. ಕಾವೇರಿಯ ನಿರಂತರ ಹರಿವು, ಸಹ್ಯಾದ್ರಿಯ ಎತ್ತರದ ಗರಿಮೆ ಹಾಗೂ ಕರಾವಳಿಯ ಕಡಲಿನ ಅಲೆಗಳ ಸಂವಾದವೇ ಕನ್ನಡ ಎಂದು ಹೇಳಿದರು. ಕನ್ನಡವು ಕೇವಲ ಗತಕಾಲದ ಇತಿಹಾಸದ ವೈಭವವಲ್ಲ, ಅದು ವರ್ತಮಾನದ ಆತ್ಮವಿಶ್ವಾಸ ಮತ್ತು ನಮ್ಮೆಲ್ಲರ ಭವಿಷ್ಯದ ಹೊಣೆಗಾರಿಕೆಯೂ ಹೌದು ಎಂದು ಅವರು ಅಭಿಪ್ರಾಯಪಟ್ಟರು.

ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಪಥಸಂಚಲನ: ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ 120 ಸಾಧಕರು ಹಾಗೂ 53 ಸಂಘ-ಸಂಸ್ಥೆಗಳಿಗೆ ಪ್ರತಿಷ್ಠಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಇದೇ ವೇಳೆ ಪೊಲೀಸ್ ಪಡೆ, ಎನ್‌ಸಿಸಿ ಹಾಗೂ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ನಡೆದ ಆಕರ್ಷಕ ಪಥಸಂಚಲನ ಎಲ್ಲರ ಗಮನ ಸೆಳೆಯಿತು.

ಈ ಸಮಾರಂಭದಲ್ಲಿ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್, ಶಾಸಕ ವೇದವ್ಯಾಸ ಕಾಮತ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ,  ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನ್ಲಿ ಅಲ್ವಾರಿಸ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *