ಮಣಿಪಾಲ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಶಾಹಿದ್ ತೆಕ್ಕಿಲ್ ಅವರು ರಾಜ್ಯದ ಯುವಕರು ಹಾಗೂ ಹಿರಿಯ ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ‘ವಯೋಜನ ಆಯೋಗ’ ಮತ್ತು ‘ಯುವಜನ ಆಯೋಗ’ಗಳನ್ನು ಸ್ಥಾಪಿಸಬೇಕು ಎಂದು ಬಲವಾದ ಸಲಹೆ ನೀಡಿದ್ದಾರೆ.
ದಿನಬಳಕೆಯ ವಸ್ತುಗಳು, ಅಡುಗೆ ಅನಿಲ, ಆಹಾರ ಉತ್ಪನ್ನಗಳು ಹಾಗೂ ಬೇಳೆಕಾಳುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಅವರ ದುಡಿಮೆಗೆ ತಕ್ಕ ಪ್ರತಿಫಲ ದೊರೆಯುವುದು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಕಳೆದ ಒಂಭತ್ತು ವರ್ಷಗಳಿಂದ ಕನಿಷ್ಠ ವೇತನದಲ್ಲಿ ಯಾವುದೇ ಗಮನಾರ್ಹ ಏರಿಕೆಯಾಗಿಲ್ಲ ಎಂದು ತಿಳಿಸಿದರು. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ನೇತೃತ್ವದಲ್ಲಿ ಕನಿಷ್ಠ ವೇತನ ಜಾರಿಗೆ ತರಲು ಪ್ರಾಮಾಣಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದೂ ಅವರು ಸ್ಪಷ್ಟಪಡಿಸಿದರು.
ಗ್ರಾಮೀಣ ಪ್ರದೇಶದ ಕಾರ್ಮಿಕರಿಗೆ ಕನಿಷ್ಠ 19 ಸಾವಿರ ರೂ. ಹಾಗೂ ನಗರ ಪ್ರದೇಶದ ಕಾರ್ಮಿಕರಿಗೆ 21 ಸಾವಿರ ರೂ. ವೇತನವನ್ನು ನಿಗದಿಪಡಿಸುವ ಅಗತ್ಯವಿದೆ. ಈ ಸಂಬಂಧ ಕೈಗೊಂಡಿರುವ ಕ್ರಮಗಳಿಗೆ ನ್ಯಾಯಾಲಯದ ತಡೆಯಾಜ್ಞೆ ಬಂದಿದ್ದು, ಶೀಘ್ರದಲ್ಲೇ ಆ ತಡೆಯಾಜ್ಞೆ ತೆರವಾಗಿ ಕಾರ್ಮಿಕರ ಪರವಾಗಿ ಅಂತಿಮ ತೀರ್ಪು ಹೊರಬರುವ ನಿರೀಕ್ಷೆಯಿದೆ. ರಾಜ್ಯದ ಸುಮಾರು ಮೂರೂವರೆ ಕೋಟಿ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ಕಾರ್ಮಿಕ ಸಂಘಟನೆಗಳ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಸಭೆಯಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದರು. ವಿಶೇಷವಾಗಿ ಪತ್ರಕರ್ತರಿಗೂ ಕನಿಷ್ಠ ವೇತನ ದೊರೆಯುವ ನಿಟ್ಟಿನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವಿಶೇಷ ಶಿಫಾರಸು ಸಲ್ಲಿಸುವ ಉದ್ದೇಶವಿದೆ ಎಂದರು.
ಇದೇ ವೇಳೆ ರಾಜ್ಯದ ಬರ ಪರಿಸ್ಥಿತಿ ಹಾಗೂ ಕೇಂದ್ರ ಸರ್ಕಾರದ ಧೋರಣೆಯ ಬಗ್ಗೆ ಮಾತನಾಡಿದ ಅವರು, ರಾಜ್ಯದ 224 ತಾಲೂಕುಗಳು ಬರದ ಬವಣೆಯಿಂದ ಸಂಕಷ್ಟ ಎದುರಿಸುತ್ತಿದ್ದರೂ ಕೇಂದ್ರ ಸರ್ಕಾರ ಈವರೆಗೆ ಸೂಕ್ತವಾಗಿ ಸ್ಪಂದಿಸಿಲ್ಲ. ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಅನುದಾನವೂ ಸಮರ್ಪಕವಾಗಿ ಬಂದಿಲ್ಲದಿರುವ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
