ಪ್ರತಿ ಗ್ರಾಮ, ವಾರ್ಡ್ ಮಟ್ಟದಲ್ಲಿ ವಾಟ್ಸಾಪ್ ಗ್ರೂಪ್ ರಚನೆಗೆ ಅಧ್ಯಕ್ಷರಾದ ಟಿ.ಎಂ. ಶಾಹಿದ್ ತೆಕ್ಕಿಲ್ ಸೂಚನೆ
ಕೊಳ್ಳೇಗಾಲ: ಕಾರ್ಮಿಕರ ರಕ್ಷಣೆ ಹಾಗೂ ಕಲ್ಯಾಣಕ್ಕಾಗಿ ನಿನ್ನೆ ಚಾಮರಾಜನಗರದ ಹನೂರಿನಲ್ಲಿ ಕಾರ್ಮಿಕರ ಸ್ಥಿತಿಗತಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಿದ ನಂತರ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ (ಸಚಿವ ದರ್ಜೆ) ಟಿ.ಎಂ ಶಾಹೀದ್ ತೆಕ್ಕಿಲ್ ಅವರು ಕೊಳ್ಳೇಗಾಲಕ್ಕೆ ಭೇಟಿ ನೀಡಿ ಸರ್ಕ್ಯೂಟ್ ಹೌಸ್ ನಲ್ಲಿ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.
ಹನೂರಿನಲ್ಲಿ ಕಂಡುಬಂದ ಕನಿಷ್ಠ ವೇತನ ಉಲ್ಲಂಘನೆಯಂತಹ ಪ್ರಕರಣಗಳು ಮತ್ತೆಲ್ಲೂ ಮರುಕಳಿಸಬಾರದು ಮತ್ತು ಯಾವುದೇ ಕಾರ್ಮಿಕ ಶೋಷಣೆಗೊಳಗಾಗಬಾರದು ಎಂಬ ನಿಟ್ಟಿನಲ್ಲಿ, ಕೊಳ್ಳೆಗಾಲದ ಪ್ರತಿಯೊಂದು ಗ್ರಾಮ ಹಾಗೂ ವಾರ್ಡ್ಗಳಲ್ಲೂ ವಾಟ್ಸಾಪ್ ಗ್ರೂಪ್ಗಳನ್ನು ರಚಿಸಿ ಬಿಗಿ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಸಭೆಯ ಪ್ರಮುಖ ನಿರ್ಧಾರಗಳು ಹಾಗೂ ಸೂಚನೆಗಳು
ವಾಟ್ಸಾಪ್ ಗ್ರೂಪ್ಗಳ ರಚನೆ
ಪ್ರತಿ ಗ್ರಾಮ ಮತ್ತು ವಾರ್ಡ್ ಮಟ್ಟದಲ್ಲಿ ವಾಟ್ಸಾಪ್ ಗ್ರೂಪ್ ತೆರೆದು, ಅದರಲ್ಲಿ ಪೋಲೀಸ್ ಇಲಾಖೆ, ಗ್ರಾಮ ಆಡಳಿತಾಧಿಕಾರಿ (VA), ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಸೇರ್ಪಡೆಗೊಳಿಸಬೇಕು.
ಕನಿಷ್ಠ ವೇತನ ಹಾಗೂ ಕಲ್ಯಾಣ ಪರಿಶೀಲನೆ
ಗ್ರಾಮಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಆದಾಯ, ಕಾರ್ಯನಿರ್ವಹಣೆ ಮತ್ತು ಅವರಿಗೆ ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ಸರಿಯಾಗಿ ತಲುಪುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಅಂತರರಾಜ್ಯ ಕಾರ್ಮಿಕರ ದಾಖಲಾತಿ
ಹೊರರಾಜ್ಯಗಳಿಂದ ಬಂದಿರುವ (Interstate) ಕಾರ್ಮಿಕರ ಸಂಖ್ಯೆ, ಅವರ ಗುರುತಿನ ದಾಖಲೆಗಳು (Documents), ಆರೋಗ್ಯ ಸ್ಥಿತಿಗತಿ ಹಾಗೂ ಕಾಲಕಾಲಕ್ಕೆ ಸರಿಯಾಗಿ ವೇತನ ಪಾವತಿಯಾಗುತ್ತಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು.
ಅಧಿಕಾರಿಗಳಿಗೆ ಸಲಹೆ-ಸೂಚನೆ
ಶೋಷಣೆ ತಡೆಯಲು ಹಾಗೂ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಹಿರಿಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಯಿತು.ಎಲ್ಲಾ ಗ್ರಾಮದಲ್ಲಿ ಮತ್ತು ನಗರದ ವಾರ್ಡ್ ವಾಟ್ಸಾಪ್ ಗ್ರೂಪ್ ಮಾಹಿತಿ ಹಾಗು ಜಾಗೃತಿ ಮಾಡಲು ಸಭೆಯಲ್ಲಿ ತಿರ್ಮಾನಿಸಲಾಯಿತು
ಈ ಪ್ರಮುಖ ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (EO) ಆರ್. ಉಮೇಶ್, ತಹಸೀಲ್ದಾರ್ ಬಸವರಾಜ್, ಉಪ ಪೋಲೀಸ್ ವರಿಷ್ಠಾಧಿಕಾರಿ (DSP) ಮೋಹನ್, ಸರ್ಕಲ್ ಇನ್ಸ್ಪೆಕ್ಟರ್ (CI) ರವೀಂದ್ರ, ಪಿಎಸ್ಐ (PSI) ಚೇತನ್ ಕುಮಾರ್, ಕಂದಾಯ ನಿರೀಕ್ಷಕ (RI) ಶಾಂತ್ರಾಜ್, ಸುರೇಶ್ ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
