ಹನೂರು ಅಮಾನವೀಯ ಕೃತ್ಯ: ಟಿ.ಎಂ. ಶಾಹಿದ್ ತೆಕ್ಕಿಲ್ ತ್ವರಿತ ಕಾರ್ಯಾಚರಣೆಗೆ ಒಲಿದ ನ್ಯಾಯ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಮಿಕರಿಗೆ ಆಸರೆ

News

ಚಾಮರಾಜನಗರ: ಹನೂರಿನಲ್ಲಿ ಕನಿಷ್ಠ ವೇತನ ನೀಡದೆ ಅನ್ಯಾಯಕ್ಕೊಳಗಾಗಿದ್ದ ಬಡ ಕಾರ್ಮಿಕರಿಗೆ ಕಷ್ಟದಿಂದ ಮುಕ್ತಿ ದೊರಕಿದ್ದು, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ (ಸಚಿವ ದರ್ಜೆ) ಟಿ.ಎಂ. ಶಾಹಿದ್ ತೆಕ್ಕಿಲ್ ಅವರ ತ್ವರಿತ ಹಾಗೂ ಕಟ್ಟುನಿಟ್ಟಿನ ಮಧ್ಯಪ್ರವೇಶದಿಂದಾಗಿ ಕಾರ್ಮಿಕರಿಗೆ ಒಂದೇ ರಾತ್ರಿಯಲ್ಲಿ ಪೂರ್ಣ ನ್ಯಾಯ ಸಿಕ್ಕಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ತಕ್ಷಣ ಸ್ಪಂದಿಸಿದ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು, ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಹಾಗೂ ಸ್ಥಳೀಯ ಶಾಸಕ ಎಂ.ಆರ್. ಮಂಜುನಾಥ್ ಅವರ ಗಮನಕ್ಕೆ ವಿಷಯವನ್ನು ತಂದರು.
ವಿಷಯದ ಗಂಭೀರತೆಯನ್ನು ಮನಗಂಡು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಶ್ರೀರೂಪಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಮೋನಾ ರೋತ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮುತ್ತುರಾಜು ಎಂ. ಅವರನ್ನೊಳಗೊಂಡ ಉನ್ನತ ಮಟ್ಟದ ತಂಡದೊಂದಿಗೆ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತ ಕಾರ್ಮಿಕರ ಕಷ್ಟ-ಸುಖಗಳನ್ನು ಆಲಿಸಿದ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ರಾತ್ರಿ 11:45 ರವರೆಗೆ ಸ್ಥಳದಲ್ಲೇ ಇದ್ದು 3 ಲಕ್ಷ ರೂ. ಕೂಲಿ ಕೊಡಿಸಿದ ಅಧ್ಯಕ್ಷರು
ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ತೆರಳಿದ ನಂತರವೂ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ರಾತ್ರಿ 11:45 ರವರೆಗೆ ಸ್ಥಳದಲ್ಲೇ ಮೊಕ್ಕಾಂ ಹೂಡಿ, ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಚಂದ್ರಯ್ಯ ಅವರೊಂದಿಗೆ ಸುದೀರ್ಘ ಕಾರ್ಯಾಚರಣೆ ನಡೆಸಿದರು. ಹಾಜರಾತಿಗೆ ತಕ್ಕಂತೆ ಸಿಗಬೇಕಿದ್ದ ಕೂಲಿ ಪಾವತಿಗೆ ಪಟ್ಟು ಹಿಡಿದ ಅವರ ಪ್ರಯತ್ನದ ಫಲವಾಗಿ, ಅಷ್ಟೂ ಕಾರ್ಮಿಕರಿಗೆ ಸಿಗಬೇಕಿದ್ದ ಸುಮಾರು 3 ಲಕ್ಷ ರೂಪಾಯಿ ಬಾಕಿ ಕೂಲಿ ಹಣವನ್ನು ಅದೇ ರಾತ್ರಿ ಸ್ಥಳದಲ್ಲೇ ಪೂರ್ಣವಾಗಿ ಪಾವತಿಸಲಾಯಿತು.
ನಾಲ್ವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲು, ಜೀತ ಪದ್ಧತಿ ನಿಗ್ರಹ ಕಾಯ್ದೆಯಡಿ ಕೇಸ್
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿ.ಎಂ ಶಾಹೀದ್ ತೆಕ್ಕಿಲ್ ಇವರ ಸೂಚನೆ ಮೇರೆಗೆ ಇಂದು ಬೆಳಗ್ಗೆ 09:50 am ಗಂಟೆಗೆ, ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಮುಖ ಆರೋಪಿ ಷಣ್ಮುಗಂ ಹಾಗೂ ಆತನ ಸಹಚರರಾದ ರೂಬಿ (39), ರಂಜಿತ್ (29), ಸರವಣನ್ (37) ಮತ್ತು ಕಾರ್ತಿಕ್ (35) ಎಂಬ ನಾಲ್ವರ ವಿರುದ್ಧ ಎಫ್‌ಐಆರ್ (ಮೊ.ಸಂ. 150/2026) ದಾಖಲಾಗಿದೆ.
ತಮಿಳುನಾಡಿನ ವಿವಿಧ ಭಾಗಗಳಿಂದ ಅನಾಥರು ಹಾಗೂ ನಿರ್ಗತಿಕರನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತಂದು, ಯಾವುದೇ ಕೂಲಿ ನೀಡದೆ, ಶಾರೀರಿಕ ಹಲ್ಲೆ ನಡೆಸಿ ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿತ್ತು. ಸಂತ್ರಸ್ತರ ಪೈಕಿ 12 ಜನರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಗಂಭೀರ ಗಾಯಗೊಂಡಿದ್ದ ಕುಮಾರ್ ಎಂಬವರನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಇಲಾಖೆಯು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಹಾಗೂ ಜೀತ ಪದ್ಧತಿ ರದ್ದತಿ ಕಾಯ್ದೆ 1976 (Bonded Labour System Abolition Act) ಅಡಿಯಲ್ಲಿ ಕಠಿಣ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
ಸದ್ಯ ಕಾರ್ಮಿಕರೆಲ್ಲರೂ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿದ್ದು ಮುಂದೆ ಅವರ ಹುಟ್ಟೂರಿಗೆ ಮರಳಲು ಬೇಕಾಗುವ ಸವಲತ್ತನ್ನು ನೀಡಲು ಟಿ.ಎಂ ಶಾಹೀದ್ ತೆಕ್ಕಿಲ್ ಸೂಚಿಸಿದ್ದಾರೆ‌.
“ಯಾವುದೇ ಮೂಲೆಯ ಕಾರ್ಮಿಕರಾಗಿದ್ದರೂ ಅವರಿಗೆ ಮಾನವೀಯತೆಯ ಆಧಾರದಲ್ಲಿ ಸೂಕ್ತ ವೇತನ ಸಿಗಲೇಬೇಕು. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಕಟ್ಟುನಿಟ್ಟಿನ ನಿಗಾವಹಿಸಲಾಗುವುದು” ಎಂದು ಟಿ.ಎಂ ಶಾಹಿದ್ ತೆಕ್ಕಿಲ್ ತಿಳಿಸಿದರು.

Leave a Reply

Your email address will not be published. Required fields are marked *