ಈ ಸೃಷ್ಟಿ ಭಗವಂತನದ್ದು ಜೀವ ಎನ್ನುವಂತದ್ದು ಭಗವಂತನ ಅತ್ಯಮೂಲ್ಯವಾದ ಕೊಡುಗೆ.ಈ ಭೂಮಿ ಮೇಲೆ ಭಗವಂತ ಸೃಷ್ಟಿಸಿದ ಪ್ರತಿಯೊಂದು ಜೀವಕ್ಕೂ ಬದುಕುವ ಹಕ್ಕಿದೆ.ಅದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ.ಅದು ಯಾವುದೇ ಜೀವಿಯಾಗಿರಲಿ ಮನುಷ್ಯನಾಗಿರಲಿ,ಪ್ರಾಣಿಯಾಗಿರಲಿ ಪಕ್ಷಿಯಾಗಿರಲಿ ಅಥವಾ ಕ್ರಿಮಿ ಕೀಟವೇ ಆಗಿರಲಿ ಅದು ಕೂಡ ಒಂದು ಜೀವವೇ ಅದಕ್ಕೂ ಈ ಭೂಮಿಯ ಮೇಲೆ ಬದುಕುವ ಹಕ್ಕಿದೆ ಅದನ್ನು ಕಸಿದುಕೊಳ್ಳುವ ಆಗಲಿ ಅಥವಾ ಅವುಗಳ ಬದುಕನ್ನು ಅತಂತ್ರ ಮಾಡುವ ಹಕ್ಕು ನಮಗ್ಯಾರಿಗೂ ಇಲ್ಲ. ಇಷ್ಟೆಲ್ಲ ಹೇಳುವುದಕ್ಕೆ ಕಾರಣವಿದೆ.ಕಾರಣ ಇಷ್ಟೇ ಜೀವಿಗಳಲ್ಲೇ ಬುದ್ಧಿ ಜೀವಿ ಎನಿಸಿಕೊಂಡ ಮಾನವ ಬಹಳ ಇಷ್ಟ ಪಟ್ಟು ಪ್ರಾಣಿಗಳನ್ನು ಸಾಕುತ್ತಾನೆ.ಅದರಲ್ಲೂ ವಿಷೇಷವಾಗಿ ನಾಯಿ ಬೆಕ್ಕುಗಳನ್ನು ಬಹಳ ಮುದ್ದಿನಿಂದ ಸಾಕುತ್ತಾನೆ.ಆದರೆ ಸಾಕಿ ದೊಡ್ಡದು ಮಾಡಿ ಅವುಗಳು ಯಾವಾಗ ಮರಿ ಹಾಕಲು ಶುರು ಮಾಡುತ್ತವೋ ಆಗ ಆ ಏನೂ ಅರಿಯದ ಪುಟ್ಟ ಮರಿಗಳನ್ನು ಕೊಂಡು ಹೋಗಿ ಕಾಡಲ್ಲೋ ಅಥವಾ ಬಸ್ಸು ನಿಲ್ದಾಣದಲ್ಲೋ ಬಿಟ್ಟು ಬರುತ್ತಾನೆ.ಈ ಸೊಗಸಿಗೆ ಅವನು ಪ್ರಾಣಿ ಪ್ರೇಮಿ ಆಗಬೇಕೇ ಅಥವಾ ಪ್ರಾಣಿಗಳನ್ನು ಸಾಕಬೇಕೇ?
ಅದರಲ್ಲೂ ವಿಧಗಳಿವೆ ಹುಟ್ಟಿದ ಮರಿಗಳು ಗಂಡಾಗಿದ್ದರೆ ಅವುಗಳು ಬಚಾವ್ ಒಂದು ವೇಳೆ ಹೆಣ್ಣಾದರೆ ಅವುಗಳ ಬದುಕಂತೂ ಅತಂತ್ರವೇ.ಕೆಲವೊಮ್ಮೆ ತಾಯಿ ಯ ಸಮೇತ ಮರಿಗಳನ್ನು ತಂದು ರಸ್ತೆ ಬದಿ ಬಿಡುವ ಬೂಪರೂ ಇದ್ದಾರೆ.ಅವುಗಳ ಸ್ಥಿತಿ ನೋಡಿದರೆ ಮಾತ್ರ ಅಯ್ಯೋ ಅನಿಸಿಬಿಡುತ್ತದೆ ಎನೂ ಅರಿಯದ ಮೂಕ ಜೀವಿಗಳು ಇದ್ಯಾವುದರ ಅರಿವೇ ಇಲ್ಲದೆ ಹಸಿವು ನೀಗಿಸಿಕೊಳ್ಳಲು ಏನಾದರು ಸಿಗಬಹುದೇ ಎಂದು ಅರಸುತ್ತಾ ಇರುತ್ತಾರೆ ಕೆಲವೊಮ್ಮೆ ಹಸಿವು ತಾಳಲಾರದೆ ರಸ್ತೆಯಲ್ಲಿ ಬಿದ್ದ ಕಲ್ಲುಗಳನ್ನೇ ಬಾಯಿಗೆ ಹಾಕಿಕೊಂಡು ಆಟವಾಡುತ್ತಾ ಇರುತ್ತವೆ ಕೆಲವೊಮ್ಮೆ ಯಾರೋ ಪುಣ್ಯಾತ್ಮ ದಾರಿಹೋಕರು ಹಾಕಿದ ಬಿಸ್ಕತ್ತುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ.
ಅವುಗಳ ಶರೀರ ನೋಡಿದರೆ ಅಯ್ಯೋ ಅನಿಸಿ ಬಿಡುತ್ತದೆ ಆ ಒಣಗಿದ ಶರೀರದಲ್ಲಿ ಅಸ್ತಿ ಪಂಜರ ಒಂದು ಬಿಟ್ಟು ಬೇರೇನು ಕಾಣುವುದಿಲ್ಲ.ಅದರ ಕಣ್ಣುಗಳಿಂದ ಸುರಿಯುತ್ತಿದ್ದ ಕಣ್ಣೀರು ಬಾಯಿ ಬಿಟ್ಟು ಹೇಳಿಕೊಳ್ಳಲಾಗದ ಅದರ ಮೂಕ ವೇದನೆ ನೋಡಿದಾಗ ಅನಿಸುವುದೊಂದೇ ತಂದು ಬಿಟ್ಟ ಪಾಪಿಗಳಿಗೆ ಶಾಪ ತಟ್ಟದೆ ಇರಬಹುದೇ? ಎಂದು.
ಒಂದು ವೇಳೆ ಪಾಪ ಅವುಗಳಿಗೆ ಬಾಯಿ ಬರುತ್ತಿದ್ದರೆ ಅವುಗಳು ಕೂಡ ತನ್ನ ಮಾಲಿಕನ ಹೆಸರು ಹೇಳುತ್ತಿದ್ದವೋ ಏನೊ.ರಸ್ತೆ ಬದಿಗಳಲ್ಲಿ ಅವುಗಳ ಪರಿಸ್ಥಿತಿ ನೋಡಿದರೆ ಅಯ್ಯೋ ಅನಿಸಿಬಿಡುತ್ತದೆ ಪಾಪ ಏನೋ ಹಾಳು ಮೂಳು ತಿಂದುಕೊಂಡು ಅತ್ತಿಂದಿತ್ತ ಅಲೆದಾಡುತ್ತಿರುತ್ತವೆ.ಪಾಪ ಕೆಲವು ಪುಣ್ಯಾತ್ಮರು ಮರಿಗಳ ರೋಧನೆ ನೋಡಲಾಗದೆ ತಮ್ಮ ಮನೆಗೆ ತೆಗೆದುಕೊಂಡು ಹೋಗಿ ಸಾಕುತ್ತಾರೆ ಆಹಾರ ಒದಗಿಸುತ್ತಾರೆ.ಸಾಕು ಪ್ರಾಣಿಗಳನ್ನು ತೆಗೆದುಕೊಂಡು ಹೋಗಿ ರಸ್ತೆ ಬದಿಯಲ್ಲಿ ಬಿಡುವುದಾದರೆ ಅವುಗಳನ್ನು ಸಾಕುವ ಅವಶ್ಯಕತೆ ಏನಿದೆ? ನಾಯಿಗಳನ್ನು ತಂದು ಬೀದಿಯಲ್ಲಿ ಬಿಡುವುದು ಮತ್ತೆ ನಾಯಿಗಳ ಹಾವಳಿ ಎಂದು ಬೊಬ್ಬೆ ಹೊಡೆಯುವುದು ಇದಕ್ಕೆಲ್ಲ ಯಾರು ಜವಾಬ್ದಾರಿ? ಈಗಾಗಲೇ ಗೊತ್ತಿದೆ ನಾಯಿಗಳು ಕಚ್ಚಿ ಅದೆಷ್ಟೋ ಜನ ಅಪಾಯಕಾರಿ ಕಾಯಿಲೆಗಳಿಗೆ ತುತ್ತಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.ಇದೆಲ್ಲಾ ಗೊತ್ತಿದ್ದೂ ಮೂಕ ಪ್ರಾಣಿಗಳನ್ನು ತಂದು ರಸ್ತೆ ಬದಿ ರಾತೋರಾತ್ರಿ ಬಿಟ್ಟು ಹೋಗುವವರ ಜನ್ಮಕ್ಕೆ ನಿಜವಾಗಿಯೂ ನಾಚಿಕೆ ಆಗಬೇಕು.ಈಗ ರಸ್ತೆಗಳಲ್ಲಿ ಎಲ್ಲಿ ನೋಡಿದರೂ ಮನುಷ್ಯರಿಗಿಂತ ಮೂಕ ಪ್ರಾಣಿಗಳೇ ಜಾಸ್ತಿ ಆಗಿವೆ.ಹೆತ್ತ ತಾಯಿಯನ್ನೇ ಬೀದಿಯಲ್ಲಿ ಬಿಟ್ಟು ಹೋಗುವ ಕಾಲದಲ್ಲಿ ಇದೇನು ದೊಡ್ಡದಲ್ಲ ಬಿಡಿ.ಆದರು ಎಷ್ಟು ಬೋರ್ಡ್ ಹಾಕಿದರು ಉಗಿದರು ನಮ್ಮ ಜನರಿಗಂತೂ ಬುದ್ಧಿ ಬರುವುದಿಲ್ಲ ಬಿಡಿ.ಆದರೂ ಮೂಕ ಪ್ರಾಣಿಗಳನ್ನು ತಂದು ರಸ್ತೆ ಬದಿಯಲ್ಲಿ ಬಿಡುವವರಿಗಂತೂ ಮನಃಸಾಕ್ಷಿಯೇ ಇಲ್ಲ.
ಪ್ರಾಪ್ತಿ ಗೌಡ