ಬೆಂಗಳೂರು: ಸಣ್ಣ ರಸ್ತೆ ಸಂಬಂಧಿತ ಅಪಘಾತದ ವೇಳೆ ಆಟೋ ಚಾಲಕನಿಗೆ ನಡು ರಸ್ತೆಯಲ್ಲೇ ಹಲ್ಲೆ ನಡೆಸಿದ್ದ ಮಹಿಳೆ ಇದೀಗ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕನ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾಳೆ. ಗರ್ಭಿಣಿಯಾಗಿರುವ ಮಹಿಳೆ, ಆಸ್ಪತ್ರೆಗೆ ತೆರಳಿ ವಾಪಸ್ ಆಗುತ್ತಿದ್ದಳು. ಈ ವೇಳೆ ಬೆಳ್ಳಂದೂರು ಬಳಿ ಆಕೆಯ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಆಟೋ ಡಿಕ್ಕಿಯಾಗಿತ್ತು ಎಂದು ಹೇಳಿಕೊಂಡಿದ್ದಾಳೆ. ಇದನ್ನು ಪ್ರಶ್ನಿಸಿದ್ದಕ್ಕೆ ಆಟೋ ಡ್ರೈವರ್ ಬೈದು ಹಲ್ಲೆಗೆ, ಯತ್ನಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಳು. ಘಟನೆ ವೇಳೆ ಕೋಪಗೊಂಡು ಚಪ್ಪಲಿಯಿಂದು ಹಲ್ಲೆ ಮಾಡಿದೆ ಎಂದು ಪೊಲೀಸರ ಮುಂದೆ ಮಹಿಳೆ ಹೇಳಿಕೊಂಡಿದ್ದಳು. ಮಹಿಳೆಯ ಹೇಳಿಕೆ ದಾಖಲಿಸಿಕೊಂಡು ಪೊಲೀಸರು ಆಕೆಯನ್ನು ವಾಪಸ್ ಕಳುಹಿಸಿದ್ದರು. ಆಟೋ ಚಾಲಕನ ಬಳಿ ಕ್ಷಮೆಯಾಚಿಸಿದ ದಂಪತಿ, ಎಲ್ಲಾ ಕನ್ನಡಿಗರು ನಮ್ಮನ್ನು ಕ್ಷಮಿಸಿ. ಆಟೋ ಚಾಲಕರ ಬಗ್ಗೆ ಗೌರವವಿದೆ. ಬೆಂಗಳೂರನ್ನು ಪ್ರೀತಿಸುತ್ತೇವೆ. ಇಲ್ಲಿನ ವಾತವರಣವನ್ನು ಪ್ರೀತಿಸುತ್ತೇವೆ ಎಂದಿದ್ದಾರೆ.
ನಾವು ಹೋಗುವಾಗ ಏನೋ ಘಟನೆ ಆಯ್ತು. ಬೇಕು ಬೇಕು ಅಂತ ಮಾಡಿದ್ದಲ್ಲ. ನಾನು ಕ್ಷಮೆ ಕೇಳುತ್ತೇನೆ. ನಾನು ಗರ್ಭಿಣಿ. ಗರ್ಭಪಾತ ಆಗುವ ಭಯದಲ್ಲಿ ಹೀಗೆ ಮಾತನಾಡಿದೆ. ಬೆಂಗಳೂರು ಅಂದರೆ ತುಂಬಾ ಇಷ್ಟ.ಬೆಂಗಳೂರು, ಬೆಂಗಳೂರು ಸಂಸ್ಕೃತಿಯನ್ನು ತುಂಬಾ ಗೌರವಿಸುತ್ತೇವೆ ಹಾಗೂ ಪ್ರೀತಿಸುತ್ತೇವೆ ಎಂದು ಮಹಿಳೆ ಹೇಳಿದ್ದಾಳೆ. ಇನ್ನು ಮಹಿಳೆಯ ಪತಿ ಮಾತನಾಡಿ, ನಾವು ಮೂರು ವರ್ಷದಿಂದ ಬೆಂಗಳೂರಿನಲ್ಲಿದ್ದೇವೆ. ತವರಿನಂತೆ ನಾವು ಇಷ್ಟ ಪಡುತ್ತೇವೆ. ನಮಗೆ ಬೆಂಗಳೂರು ಬಗ್ಗೆ ಯಾವುದೇ ನೆಗೆಟಿವ್ ಅಭಿಪ್ರಾಯಗಳಿಲ್ಲ. ಆಟೋ ಚಾಲಕರನ್ನು ಗೌರವಿಸುತ್ತೇವೆ ಎಂದರು. ಘಟನೆ ಸಂಬಂಧ ಬೆಳ್ಳಂದೂರು (Bellandur) ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಭಾನುವಾರ ಪೊಲೀಸರು ಮಹಿಳೆಯನ್ನು ಕರೆಸಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *