Nammasullia: ಮ್ಯಾಚೆಸ್ಟರ್ ಟೆಸ್ಟ್‌ನಲ್ಲಿ (Test) ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ ಟೀಂ ಇಂಡಿಯಾ (Team India), ನಾಲ್ಕನೇ ಟೆಸ್ಟ್ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದೆ. ಇಡೀ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದ ಇಂಗ್ಲೆಂಡ್ ತಂಡ, ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ನೀಡಿದ ಪ್ರದರ್ಶನದ ಮುಂದೆ ಸಂಪೂರ್ಣವಾಗಿ ಶರಣಾಯಿತು.
ಟೆಸ್ಟ್ ಪಂದ್ಯದ ಕೊನೆಯ ದಿನದಂದು, ಶುಭ್ಮನ್ ಗಿಲ್ (Shubman Gill), ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರ ಅದ್ಭುತ ಶತಕಗಳ ಆಧಾರದ ಮೇಲೆ ಟೀಂ ಇಂಡಿಯಾ ಇಂಗ್ಲೆಂಡ್‌ನ ಮುನ್ನಡೆಯನ್ನು ಕೊನೆಗೊಳಿಸಿ ಇಡೀ ದಿನ ಬ್ಯಾಟಿಂಗ್ ಮಾಡುವ ಮೂಲಕ ಸೋಲನ್ನು ತಪ್ಪಿಸಿತು.
ಬ್ಯಾಟರ್ಗಳ ಪಾರುಪತ್ಯ
ಓಲ್ಡ್ ಟ್ರಾಫರ್ಡ್‌ನಲ್ಲಿ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ನಲ್ಲಿ 311 ರನ್‌ಗಳ ಮುನ್ನಡೆ ಸಾಧಿಸಿತ್ತು. ಆ ಬಳಿಕ ಭಾರತದ ಎರಡನೇ ಇನ್ನಿಂಗ್ಸ್ನ ಮೊದಲ ಓವರ್‌ನಲ್ಲಿಯೇ ಎರಡು ವಿಕೆಟ್‌ಗಳನ್ನು ಪಡೆದುಕೊಂಡಿತು. ಇಲ್ಲಿಂದ, ಟೀಂ ಇಂಡಿಯಾದ ಸೋಲು ಖಚಿತವೆಂದು ತೋರುತ್ತಿತ್ತು. ಆದರೆ ಪಂದ್ಯದ ಕೊನೆಯ 5 ಸೆಷನ್ಗಳಲ್ಲಿ, ಶುಭ್ಮನ್ ಗಿಲ್, ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಶತಕ ಅವರ ಶತಕದ ಇನ್ನಿಂಗ್ಸ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಅವರ 90 ರನ್‌ಗಳ ಕೊಡುಗೆ ತಂಡವನ್ನು ಸೋಲಿನ ದವಡೆಯಿಂದ ಹೊರತಂದಿತು.
ಗಿಲ್- ರಾಹುಲ್ ಜೊತೆಯಾಟ
ವಾಸ್ತವವಾಗಿ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು, ನಾಯಕ ಗಿಲ್ ಮತ್ತು ರಾಹುಲ್ 174 ರನ್‌ಗಳ ಅದ್ಭುತ ಜೊತೆಯಾಟವನ್ನಾಡುವ ಮೂಲಕ ಟೀಂ ಇಂಡಿಯಾದ ಡ್ರಾ ಭರವಸೆಯನ್ನು ಹೆಚ್ಚಿಸಿದ್ದರು. ಆದರೆ ಕೊನೆಯ ದಿನದಂದು ತಂಡಕ್ಕೆ ಮೊದಲ ಸೆಷನ್‌ನಲ್ಲಿಯೇ ಆಘಾತ ಎದುರಾಯಿತು. ಬೆನ್ ಸ್ಟೋಕ್ಸ್ ಎಸೆತದಲ್ಲಿ ರಾಹುಲ್ ವಿಕೆಟ್ ಒಪ್ಪಿಸುವ ಮೂಲಕ ಇಂಗ್ಲೆಂಡ್ ಗೆಲುವಿನ ನಿರೀಕ್ಷೆಯನ್ನು ಹೆಚ್ಚಿಸಿದರು.
ಸ್ಮರಣೀಯ ಶತಕ ಸಿಡಿಸಿದ ಗಿಲ್
ರಾಹುಲ್ ವಿಕೆಟ್ ಬಳಿಕವೂ ಹೋರಾಟ ಬಿಡದ ಗಿಲ್ ಈ ಸರಣಿಯಲ್ಲಿ ತಮ್ಮ ನಾಲ್ಕನೇ ಶತಕವನ್ನು ಪೂರೈಸಿದರು. ಆದಾಗ್ಯೂ, ಮೊದಲ ಸೆಷನ್ ಮುಗಿಯುವ ಸ್ವಲ್ಪ ಮೊದಲು, ಜೋಫ್ರಾ ಆರ್ಚರ್ ಗಿಲ್ ಅವರನ್ನು ಔಟ್ ಮಾಡುವ ಮೂಲಕ ಟೀಂ ಇಂಡಿಯಾವನ್ನು ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದರು. ಅಲ್ಲದೆ ಕ್ರೀಸ್‌ಗೆ ಬಂದ ರವೀಂದ್ರ ಜಡೇಜಾ ಕೂಡ ಮೊದಲ ಎಸೆತದಲ್ಲೇ ಸ್ಲಿಪ್‌ನಲ್ಲಿ ಕ್ಯಾಚ್ ನೀಡಿದರು. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಫೀಲ್ಡರ್ ಜೋ ರೂಟ್ ಈ ಕ್ಯಾಚ್ ಹಿಡಿಯುವಲ್ಲಿ ಎಡವಿದರು.
ಮೊದಲ ಎಸೆತದಲ್ಲೇ ಜಡೇಜಾಗೆ ಜೀವದಾನ
ಈ ಜೀವದಾನದ ಸಂಪೂರ್ಣ ಲಾಭ ಪಡೆದ ಜಡೇಜಾ, ಸುಂದರ್ ಜೊತೆಗೂಡಿ ಇಂಗ್ಲೆಂಡ್‌ನಿಂದ ಜಯವನ್ನು ಕಸಿದುಕೊಂಡರು. ಈ ಇನ್ನಿಂಗ್ಸ್‌ನಲ್ಲಿ ಗಾಯಗೊಂಡ ರಿಷಭ್ ಪಂತ್ ಬದಲಿಗೆ ಬಡ್ತಿ ಪಡೆದು ಬ್ಯಾಟಿಂಗ್ಗೆ ಬಂದಿದ್ದ ಸುಂದರ್ ಕೂಡ ತನ್ನ ಸಾಮರ್ಥ್ಯವನ್ನು ಸಾಭೀತುಪಡಿಸಿದರು. ಸುಂದರ್ ಮತ್ತು ಜಡೇಜಾ ಕೊನೆಯ ಎರಡು ಸೆಷನ್ಗಳಲ್ಲಿ ಒಟ್ಟು 334 ಎಸೆತಗಳನ್ನು ಎದುರಿಸಿ 203 ರನ್‌ಗಳ ಅಜೇಯ ಪಾಲುದಾರಿಕೆಯನ್ನು ಹಂಚಿಕೊಂಡರು. ಜೊತೆಗೆ ಇಬ್ಬರೂ ತಮ್ಮ ತಮ್ಮ ಶತಕಗಳನ್ನು ಪೂರೈಸಿದರು.

