ಮಂಗಳೂರು: ವಿದೇಶದಲ್ಲಿ ಅಪ್ರಾಪ್ತಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಆರೋಪಿ ಯೂಟ್ಯೂಬರ್ ಶಾಲು ಕಿಂಗ್ ಯಾನೆ ಮುಹಮ್ಮದ್ ಸಾಲಿಯನ್ನು ಕೇರಳದ ಪೊಲೀಸರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಮದುವೆಯ ಭರವಸೆ ನೀಡಿ, ವಿದೇಶದಲ್ಲಿ ಅಪ್ರಾಪ್ತಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಎನ್ನಲಾಗಿದ್ದು, ಪೊಲೀಸರು ಆರೋಪಿ ಶಾಲು ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಕೇರಳದ ಕೊಯಿಲಾಂಡಿ ಪೊಲೀಸರು ಆತನನ್ನು ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಾಗ ಬಂಧಿಸಿದ್ದಾರೆ.
ಕೊಯಿಲಾಂಡಿಯ ಅಪ್ರಾಪ್ತ ನೀಡಿದ ದೂರಿನ ಮೇರೆಗೆ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
2016 ರಲ್ಲಿ ವಿವಾಹವಾದ ಈತನಿಗೆ ಮೂವರು ಮಕ್ಕಳಿದ್ದಾರೆ. ಅಪ್ರಾಪ್ತ ಮತ್ತು ಆರೋಪಿ ಇನ್‌ಸ್ಟಾಗ್ರಾಮ್ ಮತ್ತು ಸ್ಪ್ಯಾಪ್ ಚಾಟ್ ಮೂಲಕ ಆಪ್ತರಾಗಿದ್ದರು. ನಂತರ, ಮದುವೆಯ ಭರವಸೆಯ ಮೇರೆಗೆ ವಿದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮುಹಮ್ಮದ್ ಸಾಲಿ ಶಾಲು ಕಿಂಗ್ಸ್ ಮೀಡಿಯಾ ಮತ್ತು ಶಾಲು ಕಿಂಗ್ಸ್ ಬ್ಲಾಗ್ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಗಳನ್ನು ನಡೆಸುತ್ತಿದ್ದ. ಕಾಸರಗೋಡು ಭಾಷೆಯಲ್ಲಿದ್ದ ವೀಡಿಯೊಗಳು ಗಮನ ಸೆಳೆಯುತ್ತಿದ್ದವು. ಸೋಷಿಯಲ್ ಮೀಡಿಯಾ ಇನ್ಫ್ಲೂಯನ್ಸರ್ ಆಗಿ ಶೈಕ್ಷಣಿಕ ಸಂಸ್ಥೆಗಳು ಹಾಗೂ ವ್ಯಾಪಾರ, ಉದ್ಯಮ ಮಳಿಗೆಗಳನ್ನು ಪ್ರೊಮೋಟ್ ಮಾಡುವ ವೀಡಿಯೊ ಮಾಡುತ್ತಿದ್ದ. ಇತೀಚೆಗೆ ಆತ ಸುಳ್ಯಕ್ಕೆ ಬಂದು ವ್ಯಾಪಾರ ಮಳಿಗೆಯೊಂದರ ಪ್ರೊಮೋಷನ್ ಮಾಡಿದ್ದ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆ ಮಾಡಿದ ತಂಡದಲ್ಲಿ ಕೊಯಿಲಾಂಡಿ ಸ್ಟೇಷನ್ ಹೌಸ್ ಆಫೀಸರ್ ಶ್ರೀಲಾಲ್ ಚಂದ್ರಶೇಖರನ್, ಎಸ್‌ಐ ಆರ್‌ಸಿ ಬಿಜು, ಸಂತೋಷ್ ಲಾಲ್, ಕೆಪಿ ಗಿರೀಶ್, ಎಎಸ್‌ಐ, ವಿಜುವಾನಿಯಂಕುಲಂ, ಶ್ರೀಲತಾ ಇದ್ದರು.