ಮಂಗಳೂರು:ಜು. 25 – ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆ ನಿಷೇದಿಂದಾಗಿ ಕಟ್ಟಡದ ಮಾಲೀಕರು, ಗುತ್ತಿಗೆದಾರರು ಹಾಗೂ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಆರ್ಥಿಕತೆಯು ದುರ್ಬಲಗೊಂಡಿದೆ. ದಿನಾ ಕೂಲಿ ಕೆಲಸ ಮಾಡಿ ಸಂಬಳ ಪಡೆದು ಮನೆಗೆ ಹೋಗುತ್ತಿದ್ದ ಕಾರ್ಮಿಕ ಎರಡು ತಿಂಗಳುಗಳಿಂದ ಸಂಜೆ ಹೊತ್ತಿಗೆ ಇಂದು ಬರಿಗೈಯ್ಯಲ್ಲಿ ಮನೆಗೆ ಹೇಗೆ ಹೋಗಲಿ ಎಂಬ ಚಿಂತೆಯಲ್ಲಿದ್ದಾನೆ. ಅಧಿಕಾರಿಗಳು, ಸಂಬಂಧಪಟ್ಟ ಚುನಾಯಿತ ಪ್ರತಿನಿಧಿಗಳು ಸಮಸ್ಯೆ ಪರಿಹರಿಸುವಲ್ಲಿ ವಿಫಲರಾಗಿದ್ದಾರೆ. ಈ ಸಮಸ್ಯೆಗೆ ಸೂಕ್ತ ಗಣಿ ನೀತಿ ರೂಪಿಸಿ ಕೂಡಲೇ ಪರಿಹರಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸಲಿದ್ದೇವೆ. ಜಿಲ್ಲೆಯ ಎಲ್ಲಾ ಶಾಸಕರ ಮನೆಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಎಸ್ ಡಿ ಪಿ ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಎಚ್ಚರಿಕೆ ನೀಡಿದರು.
“ಸೂಕ್ತ ಗಣಿ ನೀತಿಯನ್ನು ರೂಪಿಸುವಂತೆ ಆಗ್ರಹಿಸಿ” ಮಂಗಳೂರಿನ ಕ್ಲಾಕ್ ಟವರ್ ಬಳಿ ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ಅಶ್ರಫ್ ಅಡ್ಡೂರು ಮಾತನಾಡಿ, ಸಂಸದ ಬ್ರಿಜೇಶ್ ಚೌಟ ರವರಿಗೆ ಕೇಂದ್ರ ಸರ್ಕಾರದ ಅಧಿಕಾರವನ್ನು ಬಳಸಿಕೊಂಡು ಒಬ್ಬ ರೌಡಿಶೀಟರ್ ನ ಹತ್ಯೆಯ ತನಿಖೆಯನ್ನು ಎನ್‌ಐಎ ಗೆ ಕೊಡಲು ಸಾಧ್ಯವಾಗುವುದಾದರೆ CRZ ಪ್ರದೇಶಕ್ಕೆ ಹಸಿರುಪೀಠ ತಡೆಯಿರುವುದುನ್ನು ಮಧ್ಯಸ್ಥಿಕೆ ವಹಿಸಿ ತೆರವುಗೊಳಿಸಲು ಯಾಕೆ ಸಾಧ್ಯವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಕಾರ್ಮಿಕ ಮುಖಂಡ ರಹ್ಮಾನ್ ಬೋಳಿಯಾರ್ ಮಾತನಾಡಿ, ಕಲ್ಲು ಗಣಿಗಾರಿಕೆಗೆ ಸರಕಾರ ಹೊಸ ತೆರಿಗೆಯನ್ನು ವಿಧಿಸಿದ್ದು ಇದರಿಂದ ಬಡ ಮಧ್ಯಮ ವರ್ಗದವರಿಗೆ ತಿರ್ವ ಸಂಕಷ್ಟ ಉಂಟಾಗಿದ್ದು ಕೂಡಲೇ ಹೊಸ ತೆರಿಗೆಯನ್ನು ಮರು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ನಗರ ಜಿಲ್ಲಾ ಕೋಶಾಧಿಕಾರಿ ಹಾಗೂ ಅರ್ಕುಳ ಪಂಚಾಯತ್ ಅಧ್ಯಕ್ಷ ಯಾಸಿರ್ ಅರ್ಕುಳ, ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯ ಹನೀಫ್ ಪೂಂಜಾಲ್ ಕಟ್ಟೆ ಉಪಸ್ಥಿತರಿದ್ದರು. ಶಫೀಕ್ ಮಲ್ಲೂರು ನೇತೃತ್ವದಲ್ಲಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ನಗರ ಜಿಲ್ಲಾ ಸಮಿತಿ ಸದಸ್ಯ ಅಕ್ಬರ್ ಅಲಿ ಕಾರ್ಯಕ್ರಮ ನಿರೂಪಿಸಿದರು