PSL 2025) ಫೈನಲ್ ಪಂದ್ಯದಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡಕ್ಕೆ ಸೋಲುಣಿಸಿ ಲಾಹೋರ್ ಖಲಂದರ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಗೆಲುವಿನ ರೂವಾರಿ ಸಿಕಂದರ್ ರಾಝ. ಕುತೂಹಲಕಾರಿ ವಿಷಯ ಎಂದರೆ ರಾಝ ಫೈನಲ್ ಪಂದ್ಯಕ್ಕೆ ಆಗಮಿಸಿದ್ದು 10 ನಿಮಿಷಗಳು ಬಾಕಿಯಿರುವಾಗ.

ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಝಿಂಬಾಬ್ವೆ ಪರ ಕಣಕ್ಕಿಳಿದಿದ್ದ ರಾಝ, ಪಂದ್ಯ ಮುಕ್ತಾಯದ ಬೆನ್ನಲ್ಲೇ ಲಾಹೋರ್​ಗೆ ವಿಮಾನ ಹತ್ತಿದ್ದರು. ಅದು ಕೂಡ ಪಿಎಸ್​ಎಲ್​ನ ಫೈನಲ್ ಪಂದ್ಯವಾಡಲು. ಅದಾಗಲೇ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆದಿದ್ದ ರಾಝ ಪಂದ್ಯ ಶುರುವಾಗಲು 15 ನಿಮಿಷಗಳಿದ್ದಾಗಲೂ ಮೈದಾನಕ್ಕೆ ತಲುಪಿರಲಿಲ್ಲ.

ಇನ್ನೇನು ನಾಯಕರುಗಳು ಟಾಸ್ ಪ್ರಕ್ರಿಯೆಗೆ ತೆರಳಲಿದ್ದಾರೆ ಅನ್ನುವಷ್ಟರಲ್ಲಿ ಸಿಕಂದರ್ ರಾಝ ಗದ್ದಾಫಿ ಸ್ಟೇಡಿಯಂ ತಲುಪಿದ್ದಾರೆ. ಅದರಂತೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆದ ರಾಝ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ಈಗ ಇತಿಹಾಸ.

ಫೈನಲ್ ಫೈಟ್:

ಲಾಹೋರ್​ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಗ್ಲಾಡಿಯೇಟರ್ಸ್ ಪರ ಹಸನ್ ನವಾಝ್ 43 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 76 ರನ್ ಬಾರಿಸಿದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಅವಿಷ್ಕ ಫರ್ನಾಂಡೊ 29 ರನ್ ಬಾರಿಸಿದರೆ, ಕೆಳ ಕ್ರಮಾಂಕದಲ್ಲಿ ಫಹೀಮ್ ಅಶ್ರಫ್ 28 ರನ್ ಚಚ್ಚಿದರು. ಈ ಮೂಲಕ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು 20 ಓವರ್ಗಳಲ್ಲಿ 201 ರನ್ ಕಲೆಹಾಕಿತು.

ಈ ಕಠಿಣ ಗುರಿ ಬೆನ್ನತ್ತಿದ ಲಾಹೋರ್ ಖಲಂದರ್ಸ್ ತಂಡಕ್ಕೆ ಆರಂಭಿಕ ಆಟಗಾರ ಮೊಹಮ್ಮದ್ ನಯೀಮ್ (46) ಉತ್ತಮ ಆರಂಭ ಒದಗಿಸಿದರು. ಆ ಬಳಿಕ ಬಂದ ಅಬ್ದುಲ್ಲಾ ಶಫೀಕ್ 41 ರನ್ ಬಾರಿಸಿದರು. ಇನ್ನು ಸ್ಪೋಟಕ ಇನಿಂಗ್ಸ್ ಆಡಿದ ಕುಸಾಲ್ ಪೆರೇರಾ 31 ಎಸೆತಗಳಲ್ಲಿ 62 ರನ್ ಚಚ್ಚಿದರು.

ಇದಾಗ್ಯೂ ಕೊನೆಯ ಎರಡು ಓವರ್​ಗಳಲ್ಲಿ ಲಾಹೋರ್ ಖಲಂದರ್ಸ್ ತಂಡಕ್ಕೆ ಗೆಲ್ಲಲು 31 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಸಿಕಂದರ್ ರಾಝ ಇಡೀ ಪಂದ್ಯದ ಚಿತ್ರಣ ಬದಲಿಸಿ ಬಿಟ್ಟರು. ಕೇವಲ 7 ಎಸೆತಗಳನ್ನು ಎದುರಿಸಿದ ರಾಝ 2 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 22 ರನ್ ಚಚ್ಚಿದರು. ಈ ಮೂಲಕ 19.5 ಓವರ್​ಗಳಲ್ಲಿ ಲಾಹೋರ್ ಖಲಂದರ್ಸ್ ತಂಡವನ್ನು ಗುರಿ ಮುಟ್ಟಿಸಿ, 6 ವಿಕೆಟ್​ಗಳ ಜಯ ತಂದುಕೊಟ್ಟರು.

ಅಂದರೆ ದೂರದ ನಾಟಿಂಗ್​ಹ್ಯಾಮ್​ನಿಂದ ಲಾಹೋರ್​ಗೆ ಬಂದು, ಪಂದ್ಯದ ಆರಂಭಕ್ಕೂ 10 ನಿಮಿಷ ಮುಂಚಿತವಾಗಿ ತಂಡವನ್ನು ಕೂಡಿಕೊಂಡ ಸಿಕಂದರ್ ರಾಝ ಅವರ ಸ್ಪೋಟಕ ಬ್ಯಾಟಿಂಗ್​ನಿಂದಾಗಿ ಲಾಹೋರ್​ ಖಲಂದರ್ಸ್ ತಂಡವು ಚಾಂಪಿಯನ್ ಅಲಂಕರಿಸುವಂತಾಯಿತು.

Leave a Reply

Your email address will not be published. Required fields are marked *