ಗೂನಡ್ಕ: ಪೇರಡ್ಕ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ಪೇರಡ್ಕ ಜಮಾಅತ್ ಅಧ್ಯಕ್ಷರಾದ ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್ ಧ್ವಜಾರೋಹಣ ನೆರವೇರಿಸಿದರು. ಸ್ಥಳೀಯ ಖತೀಬ್ ಅಹ್ಮದ್ ನ‌ಈಂ ಮ‌ಅಬರಿ ಫೈಝಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಈ ದಿನ ಸಮಸ್ತ ಭಾರತೀಯರ ಹೆಮ್ಮೆಯ ದಿನವಾಗಿದೆ. ಪೂರ್ವಿಕರಾದ ನಮ್ಮ ರಾಷ್ಟ್ರ ನಾಯಕರು ಜಾತಿ ಧರ್ಮಗಳ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಪಡೆದ ಈ ಸ್ವಾತಂತ್ರ್ಯವನ್ನು ನಾವೆಲ್ಲರೂ ಸಮಾನವಾಗಿ ಅನುಭವಿಸಲು ಸಾಧ್ಯವಾಗಬೇಕು. ಧರ್ಮದ ಆಧಾರದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಇತಿಹಾಸದ ಪುಟಗಳಿಂದ ಅಳಿಸಿ ಹಾಕುವ ದುಷ್ಕೃತ್ಯ ನಿಲ್ಲಬೇಕು ಎಂದು ಹೇಳಿದರು. ಅಧ್ಯಕ್ಷ ಭಾಷಣ ಮಾಡಿದ ಟಿ.ಎಂ ಶಹೀದ್ ತೆಕ್ಕಿಲ್ ಅವರು, ಬ್ರಿಟಿಷರು ಭಾರತೀಯರನ್ನು ಗುಲಾಮರಾಗಿ ಇಟ್ಟುಕೊಂಡು ಇಲ್ಲಿನ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆದು ಭಾರತವನ್ನು ಬರಿದಾಗಿಸಿದ್ದರು. ಅವರಿಂದ ಸ್ವತಂತ್ರಗೊಂಡ ಈ ದಿನವು ನಮಗೆಲ್ಲರಿಗೂ ಸಂಭ್ರಮದ ದಿನವಾಗಿದೆ. ನಾವೆಲ್ಲರೂ ರಾಷ್ಟ್ರ ನಿರ್ಮಾಣದಲ್ಲಿ ಭಾಗಿಯಾಗಿ ಸ್ವಾತಂತ್ರ್ಯವನ್ನು ಅರ್ಥವತ್ತಾಗಿಸೋಣ ಎಂದು ಕರೆ ನೀಡಿದರು. ಮದ್ರಸಾ ಸಹ ಅಧ್ಯಾಪಕರಾದ ಹಾರಿಸ್ ಕಾಮಿಲ್ ಅಝ್ಹರಿ, ಗಲ್ಫ್ ಪ್ರತಿನಿಧಿ ರಿಫಾಯಿ ಪಟೇಲ್ ಗೂನಡ್ಕ ಶುಭಹಾರೈಸಿ ಮಾತನಾಡಿದರು. ಸಮಾರಂಭದಲ್ಲಿ ಮುಂದಿನ ಮೀಲಾದ್ ಫೆಸ್ಟ್ ‘ ಮಹಬ್ಬಃ’25 ‘ ಲೋಗೋ ಲಾಂಚಿಂಗ್ ನಡೆಯಿತು. ಸ್ವಾತಂತ್ರೋತ್ಸವದ ಭಾಗವಾಗಿ ಎಸ್ಕೆ ಎಸ್‌ಬಿವಿ ವತಿಯಿಂದ ವಿದ್ಯಾರ್ಥಿಗಳಿಗೆ ನಡೆಸಲಾದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಬಹುಮಾನ ವಿತರಣೆಯನ್ನು ಅತಿಥಿಗಳು ನಡೆಸಿಕೊಟ್ಟರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎಂ.ಆರ್.ಡಿ.ಎ ಅಧ್ಯಕ್ಷ ಜನಾಬ್ ಜಿ.ಕೆ ಹಮೀದ್ ಗೂನಡ್ಕ, ಜಮಾಅತ್ ಉಪಾಧ್ಯಕ್ಷರಾದ ಹನೀಫ್ ಟಿ.ಬಿ, ಕಾರ್ಯದರ್ಶಿ ಉಸ್ಮಾನ್ ಕೆ.ಎಂ, ಕೋಶಾಧಿಕಾರಿ ಮುಹಮ್ಮದ್ ಕುಂಞಿ ತೆಕ್ಕಿಲ್, ಗಲ್ಫ್ ಪ್ರತಿನಿಧಿ ಅರಫಾತ್ ಗೂನಡ್ಕ ಗಣ್ಯಾತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಉಸ್ಮಾನ್ ಕೆ.ಎಂ ಸ್ವಾಗತಿಸಿ, ಎಸ್ಕೆ ಎಸ್‌ಬಿವಿ ಪ್ರಧಾನ ಕಾರ್ಯದರ್ಶಿ ಇಸ್ಹಾಕ್ ಪೇರಡ್ಕ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಣೆ ನಡೆಯಿತು.

Leave a Reply

Your email address will not be published. Required fields are marked *