ದಾಂಪತ್ಯ ಕಲಹ, ದಾಂಪತ್ಯ ದ್ರೋಹ ಹಾಗೂ ವಿಚ್ಛೇದನ ಇಂದು ಸಾಮಾನ್ಯ ಎನಿಸಿದೆ. ಸಣ್ಣ ಪುಟ್ಟ ಕಾರಣಗಳಿಗೆ ದಂಪತಿಗಳು ದೂರಾಗಿ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ. ಆದರೆ ಯುವ ಸಮುದಾಯದವರೇ ವಿಚ್ಛೇದನ ಪಡೆಯುವುದು ಹೆಚ್ಚು 20 ರಿಂದ 3 ವರ್ಷ ದಾಂಪತ್ಯ ಮಾಡಿದವರು ವಿಚ್ಛೇದನ ಪಡೆಯುವುದು ತೀರಾ ವಿರಳ ಆದರೆ ಇಲ್ಲವೇ ಇಲ್ಲ ಎಂದಲ್ಲ, 20 ರಿಂದ 30 ವರ್ಷದ ದಾಂಪತ್ಯದ ನಂತರವೂ ವಿಚ್ಛೇದನ ಪಡೆಯುವವರಿದ್ದಾರೆ.

ಆದರೆ ಇಲ್ಲೊಂದು ಕಡೆ 70 ವರ್ಷ ದಾಂಪತ್ಯದ ನಂತರ ದಂಪತಿ ವಿಚ್ಛೇದನ ಪಡೆದಿದ್ದಾರೆ. ಹೌದು ಅಚ್ಚರಿ ಎನಿಸಿದರು ಈ ಘಟನೆ ನಿಜ ಅಂದಹಾಗೆ ಈ ಘಟನೆ ನಡೆದಿರುವುದು 2011ರಲ್ಲಿ ಇಟಲಿಯಲ್ಲಿ. ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿರುವ ಕಾರಣಕ್ಕೆ ಮತ್ತೆ ಈ ಸ್ಟೋರಿಯನ್ನು ನೆನಪು ಮಾಡುತ್ತಿದ್ದೇವೆ.

99ರಲ್ಲಿ ವಿಚ್ಛೇದನಕ್ಕೆ ಕಾರಣವಾಗಿದ್ದೇನು?

70 ವರ್ಷಗಳ ಕಾಲ ದಾಂಪತ್ಯ ನಡೆಸಿದ ಈ ಜೋಡಿ ಅದರಲ್ಲೂ ಪತಿ ತಮ್ಮ 99ನೇ ವಯಸ್ಸಿನಲ್ಲಿ ತಮ್ಮ 96 ವರ್ಷದ ಪತ್ನಿಗೆ ವಿಚ್ಛೇದನ ನೀಡಲು ಕೋರ್ಟ್ ಮೆಟ್ಟಿಲೇರಿದಾಗ ಇಡೀ ಜಗತ್ತೇ ಆ ಜೋಡಿಯನ್ನು ವಿಶೇಷವಾಗಿ ಆ 99 ರ ಹರೆಯದ ಆ ವೃದ್ಧನನ್ನು ಬಹಳ ಅಚ್ಚರಿಯಿಂದ ನೋಡಿತ್ತು, 99ರ ಹರೆಯದಲ್ಲಿ ಆ ಅಜ್ಜನಿಗೆ ತನ್ನ ಪತ್ನಿಗೆ ವಿಚ್ಛೇದನ ನೀಡಬೇಕು ಎನಿಸಿದ್ದು ಏಕೆ ಎಂಬ ಕುತೂಹಲದಿಂದ ಜಗತ್ತು ಅವರತ್ತ ನೋಡಲು ಶುರು ಮಾಡಿತ್ತು. ಜೊತೆಗೆ ವೃದ್ಧನ ಕಾರಣ ಕೇಳಿ ಮತ್ತಷ್ಟು ಅಚ್ಚರಿಪಟ್ಟಿತ್ತು. ಹಾಗಿದ್ರೆ ಈ ವೃದ್ಧ ದಂಪತಿಯ ವಿಚ್ಛೇದನಕ್ಕೆ ಕಾರಣವಾಗಿದ್ದೇನು ಎಂಬುದನ್ನು ತಿಳಿದರೆ ನಿಮಗೂ ಅಚ್ಚರಿಯಾಗುತ್ತದೆ.

ದಾಂಪತ್ಯ ದ್ರೋಹ ಕಾರಣ ನೀಡಿದ ಪತಿ

ದಾಂಪತ್ಯ ದ್ರೋಹವನ್ನು ಯಾರೂ ಸಹಿಸಿಕೊಳ್ಳುವುದಿಲ್ಲ. ಒಬ್ಬರು ತಮಗೆ ಮೋಸ ಮಾಡಿದ್ದಾರೆ ಎಂದು ತಿಳಿದಾಗ ಆಘಾತವಾಗುವುದು ಸಹಜ ಆದರೆ 99ರ ಹರೆಯದಲ್ಲಿ ಈ ಅಜ್ಜನಿಗೆ ಪತ್ನಿ 60 ವರ್ಷಗಳ ಹಿಂದೆಯೇ ತನಗೆ ವಂಚಿಸಿದ್ದಾಳೆ ಎಂಬ ವಿಚಾರ ತಿಳಿದು ಮನಸ್ಸು ಪಡೆದಿದೆ. ಹೌದು ತನ್ನ ಪತ್ನಿ ತನಗೆ 60 ವರ್ಷಗಳ ಹಿಂದೆ ವಂಚಿಸಿದ್ದಾಳೆ. ಆಕೆ ಇಟ್ಟುಕೊಂಡಿದ್ದ ಆಫೇರ್‌ಗೆ ಸಂಬಂಧಿಸಿದ ಪತ್ರವೊಂದು ತನಗೆ ಈಗ ಸಿಕ್ಕಿದ ನಂತರ 99ರ ವೃದ್ಧ ಪತ್ನಿಗೆ ವಿಚ್ಛೇದನ ನೀಡುವುದಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದ.

ಆಂಗ್ಲ ಮಾಧ್ಯಮ ಟೆಲಿಗ್ರಾಫ್‌ ಆಗ ವರದಿ ಮಾಡಿದಂತೆ ಆಂಟೋನಿಯೊ ಸಿ. ಹೀಗೆ ಪತ್ನಿ ಮೋಸ ಮಾಡಿದ್ದಾಳೆ ಎಂದು ವಿಚ್ಛೇದನಕ್ಕೆ ಮುಂದಾಗಿದ್ದ ವ್ಯಕ್ತಿ. ಆಂಟೋನಿಯೊ ಸಿ.ಕ್ರಿಸ್‌ಮಸ್‌ಗೆ ಕೆಲವು ದಿನಗಳ ಮೊದಲು ಹಳೆಯ ಡ್ರಾಯರ್‌ಗಳ ಪೆಟ್ಟಿಗೆಯಲ್ಲಿ ಏನನ್ನೋ ಹುಡುಕಾಟ ನಡೆಸುತ್ತಿದ್ದಾಗ ತನ್ನ ಪತ್ನಿ ಮತ್ತು ಆಕೆಯ ಮಾಜಿ ಪ್ರೇಮಿಯ ನಡುವೆ ವಿನಿಮಯವಾದ ಪತ್ರವೊಂದು ಸಿಕ್ಕಿದೆ. ಇದರಿಂದ ಸಿಟ್ಟಿಗೆದ್ದ ತಾತಪ್ಪ. ಪತ್ನಿಯ ರೋಸಾ ಸಿ. ಬಳಿ ಈ ವಿಚಾರವನ್ನು ಪ್ರಶ್ನಿಸಿದ್ದು, ಅಜ್ಜಿಯೂ ಈ ವಿಚಾರವನ್ನು ಒಪ್ಪಿಕೊಂಡರು ಹಾಗೂ ಗಂಡನನ್ನು ದಾಂಪತ್ಯದಲ್ಲಿಯೇ ಉಳಿಯುವಂತೆ ಮನವೊಲಿಸುವ ಪ್ರಯತ್ನ ಮಾಡಿದರು.

ಡಿವೋರ್ಸ್‌ ವೇಳೆ ದಂಪತಿೆಗಿದ್ದರು 5 ಮಕ್ಕಳು, 12 ಮೊಮ್ಮಕ್ಕಳು

ಆದರೆ ಸುಮಾರು 7 ದಶಕಗಳನ್ನೇ ಜೊತೆಯಾಗಿಯೇ ಕಳೆದಿದ್ದರೂ ಆಂಟೋನಿಯೊ ಸಿ. ಮಾತ್ರ ಪತ್ನಿ ತನ್ನ ಯೌವ್ವನದ ದಿನಗಳಲ್ಲಿ ಮಾಡಿದ್ದ ತಪ್ಪನ್ನು ಕ್ಷಮಿಸಲು ಸಿದ್ಧರಿಲ್ಲದೇ ವಿಚ್ಚೇದನಕ್ಕೆ ಮುನ್ನುಡಿ ಬರೆದರು. ವಿಚ್ಛೇದನದ ವೇಳೆ ಈ ದಂಪತಿಗೆ ಐದು ಮಕ್ಕಳು ಹಾಗೂ 12 ಮೊಮ್ಮಕ್ಕಳಿದ್ದರು ಹಾಗೂ ಒಂದು ಮರಿಮೊಮ್ಮಗನೂ ಇದ್ದ. ಮೂಲತಃ ಇಟಲಿಯ ಸಾರ್ಡಿನಿಯಾದವರಾದ ಆಂಟೋನಿಯೊ ಸಿ. 1930 ರ ದಶಕದಲ್ಲಿ ಪತ್ನಿ ರೋಸಾ ಸಿ. ಅವರನ್ನು ಭೇಟಿಯಾಗಿದ್ದರು. ಆಕೆಯ ತವರು ನೇಪಲ್ಸ್‌ನಲ್ಲಿ ಇಟಾಲಿಯನ್ ಕ್ಯಾರಬಿನಿಯರಿಯ ಭಾಗವಾಗಿ ಸೇವೆ ಸಲ್ಲಿಸುತ್ತಿದ್ದಾಗ ಈ ದಂಪತಿ ಭೇಟಿಯಾಗಿದ್ದರು.

ಅದೇನೇ ಇರಲಿ ಈ ಸ್ಟೋರಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಈ ತಲೆಮಾರಿನ ನೆಟ್ಟಿಗರು ಹಲವು ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ. ಸ್ವಲ್ಪ ವಿಳಂಬವಾಗಿದ್ದರೆ ಈ ತಾತನಿಗೆ ಅಜ್ಜಿ ಮೋಸ ಮಾಡಿದ್ದಾಳೆ ಎಂಬುದು ಸ್ವರ್ಗಕ್ಕೆ ಹೋದ ನಂತರ ಗೊತ್ತಾಗುತ್ತಿತ್ತು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಪೆನ್ಶನ್ ಪಡೆಯುವ ವಯಸಲ್ಲಿ ಈ ರೀತಿಯ ಟೆನ್ಶನ್ ಅಗ್ತಿದ್ಯಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಸಾಯೋ ವಯಸ್ಸಲ್ಲಿ ಇದೆಲ್ಲಾ ಬೇಕಿತ್ತಾ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಪೋಸ್ಟ್ ಭಾರಿ ವೈರಲ್ ಆಗ್ತಿದೆ. ಆದರೆ ಈಗ ಈ ದಂಪತಿ ಬದುಕಿದ್ದಾರೊ ಇಲ್ಲವೋ ಎಂಬ ಬಗ್ಗೆ ಮಾಹಿತಿ ಇಲ್ಲ.

Leave a Reply

Your email address will not be published. Required fields are marked *