ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಭಾನುವಾರ (ಮೇ 17) ನಡೆದ ಐಪಿಎಲ್ 2026ರ 61ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಪಂಜಾಬ್ ಕಿಂಗ್ಸ್ (PBKS) ವಿರುದ್ಧ 23 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮಹತ್ವದ ಗೆಲುವಿನೊಂದಿಗೆ ಆರ್‌ಸಿಬಿ ಟೂರ್ನಿಯಲ್ಲಿ ಅಧಿಕೃತವಾಗಿ ಪ್ಲೇಆಫ್‌ಗೆ (Playoffs) ಅರ್ಹತೆ ಪಡೆದುಕೊಂಡಿದೆ.

ಪಂದ್ಯದ ಹೈಲೈಟ್ಸ್

  • ಆರ್‌ಸಿಬಿ ಬೃಹತ್ ಮೊತ್ತ: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿ 37 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳ ಸಹಿತ 58 ರನ್ ಸಿಡಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ದೇವದತ್ ಪಡಿಕ್ಕಲ್ 45 ರನ್ ಬಾರಿಸಿ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
  • ಪಂಜಾಬ್ ಹೋರಾಟ: 223 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಆರಂಭದಲ್ಲೇ ಆಘಾತ ಅನುಭವಿಸಿತು. ಮಧ್ಯಮ ಕ್ರಮಾಂಕದಲ್ಲಿ ಶಶಾಂಕ್ ಸಿಂಗ್ ಕೇವಲ 22 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ (56 ರನ್) ಬಾರಿಸಿ ಗೆಲುವಿನ ಆಸೆ ಮೂಡಿಸಿದರು. ಮಾರ್ಕಸ್ ಸ್ಟೊಯಿನಿಸ್ ಕೂಡ 37 ರನ್ ಗಳಿಸಿ ಹೋರಾಟ ನೀಡಿದರು.
  • ಆರ್‌ಸಿಬಿ ಬೌಲಿಂಗ್ ಕಮಾಲ್: ಅಂತಿಮ ಓವರ್‌ಗಳಲ್ಲಿ ಕರಾರುವಕ್ಕಾದ ಬೌಲಿಂಗ್ ದಾಳಿ ಸಂಘಟಿಸಿದ ಆರ್‌ಸಿಬಿ, ಪಂಜಾಬ್ ತಂಡವನ್ನು 20 ಓವರ್‌ಗಳಲ್ಲಿ 199/8 ರನ್‌ಗಳಿಗೆ ಕಟ್ಟಿಹಾಕಿತು. ಆರ್‌ಸಿಬಿ ಪರ ಮಿಂಚಿದ ರಸಿಖ್ ಸಲಾಂ 3 ವಿಕೆಟ್ ಕಬಳಿಸಿ ತಂಡದ ಗೆಲುವನ್ನು ಖಚಿತಪಡಿಸಿದರು. ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್‌ವುಡ್ ತಲಾ ಒಂದೊಂದು ವಿಕೆಟ್ ಪಡೆದರು.
  • ಸಿಎಸ್‌ಕೆಗೆ ಒಲಿದ ಅದೃಷ್ಟ: ಪಂಜಾಬ್ ಸೋಲಿನಿಂದ ಚೆನ್ನೈಗೆ ಲಾಭವೇನು?
    ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಸಾಧಿಸಿದ ಈ ಗೆಲುವು ಕೇವಲ ಬೆಂಗಳೂರು ಅಭಿಮಾನಿಗಳಿಗೆ ಮಾತ್ರವಲ್ಲ, ಚೆನ್ನೈ ಸೂಪರ್ ಕಿಂಗ್ಸ್ (CSK) ಫ್ಯಾನ್ಸ್‌ಗೂ ಸಂಭ್ರಮ ತಂದಿದೆ. ಪಾಯಿಂಟ್ಸ್ ಟೇಬಲ್‌ನಲ್ಲಿ ಪ್ಲೇಆಫ್‌ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದ ಪಂಜಾಬ್ ತಂಡದ ಸೋಲಿನಿಂದಾಗಿ, ಸಿಎಸ್‌ಕೆ ತಂಡದ ಪ್ಲೇಆಫ್ ಹಾದಿ ಮತ್ತಷ್ಟು ಸುಗಮವಾಗಿದೆ.
    ಪ್ಲೇಆಫ್ ರೇಸ್‌ನಲ್ಲಿ ಪ್ರಬಲ ಪೈಪೋಟಿ ನೀಡುತ್ತಿದ್ದ ಪಂಜಾಬ್ ಕಿಂಗ್ಸ್ ಇದೀಗ ಸೋತು ಅಂಕಪಟ್ಟಿಯಲ್ಲಿ ಹಿಂದೆ ಬಿದ್ದಿರುವುದು, ಋತುರಾಜ್ ಗಾಯಕ್ವಾಡ್ ಮತ್ತು ಎಂ.ಎಸ್. ಧೋನಿ ಪಡೆಯ ಪ್ಲೇಆಫ್ ಲೆಕ್ಕಾಚಾರಗಳಿಗೆ ದೊಡ್ಡ ವರದಾನವಾಗಿ ಪರಿಣಮಿಸಿದೆ. ಈ ಫಲಿತಾಂಶದಿಂದ ಸಿಎಸ್‌ಕೆ ತನ್ನ ಮುಂದಿನ ಪಂದ್ಯಗಳಲ್ಲಿ ಸ್ವಲ್ಪ ನಿರಾಳವಾಗಿ ಕಣಕ್ಕಿಳಿಯುವ ಅವಕಾಶ ಪಡೆದುಕೊಂಡಿದೆ.

‘ಮತ್ತೆ ಹೀಗ್ ಮಾಡ್ಬೇಡಿ’: ಪಂಜಾಬ್‌ಗೆ ಆರ್‌ಸಿಬಿ ತಿರುಗೇಟು

ಈ ಪಂದ್ಯ ಕೇವಲ ಮೈದಾನದಲ್ಲಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲೂ ಸೇಡಿನ ಸಮರವಾಗಿತ್ತು. ಏಪ್ರಿಲ್ 28 ರಂದು ಪಂಜಾಬ್ ತಂಡವು ಬ್ಯಾಟಿಂಗ್ ಮಾಡುವಾಗ 4.3 ಓವರ್‌ಗಳಲ್ಲಿ 49/1 ಗಳಿಸಿದ್ದ ಸ್ಕೋರ್‌ಕಾರ್ಡ್ ಅನ್ನು ಎಕ್ಸ್ (Twitter) ನಲ್ಲಿ ಪೋಸ್ಟ್ ಮಾಡಿ, ಆರ್‌ಸಿಬಿಯ ಹಳೆಯ ’49 ಆಲೌಟ್’ ದಾಖಲೆಯನ್ನು ಪರೋಕ್ಷವಾಗಿ ಗೇಲಿ ಮಾಡಿತ್ತು.
ಆದರೆ, ಈ ಪಂದ್ಯದಲ್ಲಿ ಪಂಜಾಬ್ ತಂಡವನ್ನು 6 ಓವರ್‌ಗಳಲ್ಲಿ 49/3 ಸ್ಕೋರ್‌ಗೆ ನಿಯಂತ್ರಿಸಿದ ಆರ್‌ಸಿಬಿ, ಪಂಜಾಬ್‌ನ ಹಳೆಯ ಪೋಸ್ಟ್‌ಗೆ ರಿಪ್ಲೈ ನೀಡುತ್ತಾ “It’s okay ಮತ್ತೆ ಈ ರೀತಿ ಮಾಡ್ಬೇಡ” ಎಂದು ಬರೆದುಕೊಂಡು ತಕ್ಕ ತಿರುಗೇಟು ನೀಡಿದೆ. ಆರ್‌ಸಿಬಿ ಅಭಿಮಾನಿಗಳು ಈ ಟ್ವೀಟ್ ಅನ್ನು ಸಖತ್ ಟ್ರೆಂಡ್ ಮಾಡುತ್ತಿದ್ದಾರೆ.

ಪ್ಲೇಆಫ್ ಲೆಕ್ಕಾಚಾರ

ಈ ಸೋಲಿನೊಂದಿಗೆ ಟೂರ್ನಿಯಲ್ಲಿ ಆರಂಭಿಕ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಉಳಿದಿದ್ದ ಪಂಜಾಬ್ ಕಿಂಗ್ಸ್, ಇದೀಗ ಸತತ 6ನೇ ಸೋಲು ಕಾಣುವ ಮೂಲಕ ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಮತ್ತೊಂದೆಡೆ, ಆರ್‌ಸಿಬಿ ಪ್ಲೇಆಫ್‌ಗೆ ಎಂಟ್ರಿ ಕೊಟ್ಟಿದ್ದು, ಟಾಪ್-2 ಸ್ಥಾನದ ಮೇಲೆ ಕಣ್ಣಿಟ್ಟಿದೆ.

Leave a Reply

Your email address will not be published. Required fields are marked *