ಮುಂಚೆ ಕೇಳಿದರೆ ಸಿಗಲ್ಲ, ಬಸ್ ಹೊರಟ ಮೇಲೆ ನಿಲ್ಲಿಸಲ್ಲ! KSRTC ಅಧಿಕಾರಿಗಳೇ ಇದಕ್ಕೆ ಕೊನೆ ಯಾವಾಗ?

ಸುಳ್ಯ-ಅರಂತೋಡು ಕೆ.ಎಸ್.ಆರ್.ಟಿ.ಸಿ ಎಕ್ಸ್‌ಪ್ರೆಸ್ ಬಸ್ ನಿಲುಗಡೆ ಗೊಂದಲ: ಪ್ರಯಾಣಿಕರ ನಿತ್ಯದ ಪರದಾಟ, ಸಾರ್ವಜನಿಕರ ತೀವ್ರ ಆಕ್ರೋಶ

ಸುಳ್ಯ: ಸುಳ್ಯದಿಂದ ಮಡಿಕೇರಿ ಮಾರ್ಗವಾಗಿ ಸಂಚರಿಸುವ ಕೆ.ಎಸ್.ಆರ್.ಟಿ.ಸಿ (KSRTC) ಎಕ್ಸ್‌ಪ್ರೆಸ್ ಬಸ್‌ಗಳು ಅರಂತೋಡಿನಲ್ಲಿ ನಿಲುಗಡೆ ನೀಡುವ ವಿಚಾರದಲ್ಲಿ ತೀವ್ರ ಗೊಂದಲ ಸೃಷ್ಟಿಸಿದ್ದು, ಸಾರ್ವಜನಿಕರು ಹಾಗೂ ಗ್ರಾಮೀಣ ಭಾಗದ ಪ್ರಯಾಣಿಕರು ನಿತ್ಯ ಪರದಾಡುವಂತಾಗಿದೆ.
ಟಿಕೆಟ್ ನೀಡುವಾಗ ನಿಲುಗಡೆ ಇಲ್ಲ ಎನ್ನುವ ಸಿಬ್ಬಂದಿ!
ಪ್ರಯಾಣಿಕರ ಪ್ರಕಾರ, ಬಸ್ ಸುಳ್ಯ ನಿಲ್ದಾಣದಿಂದ ಹೊರಡುವ ಮುನ್ನ ನಿರ್ವಾಹಕರು (Conductor) ಬಸ್‌ನಲ್ಲಿ ಇರುವುದಿಲ್ಲ. ಬಸ್ ನಿಲ್ದಾಣದಲ್ಲಿ ಅವರ ಬಳಿ ವಿಚಾರಿಸಲು ಹೋದರೆ ಸಿಬ್ಬಂದಿ ಸಿಗುವುದಿಲ್ಲ. ಒಂದು ವೇಳೆ ಅವರನ್ನೇ ಹುಡುಕುತ್ತಾ ಕಾಯುತ್ತಾ ನಿಂತರೆ ಬಸ್‌ನಲ್ಲಿ ಸೀಟು ಕೈತಪ್ಪಿ ಹೋಗುತ್ತದೆ. ಹೀಗಾಗಿ ಅನಿವಾರ್ಯವಾಗಿ ಪ್ರಯಾಣಿಕರು ಬಸ್ ಹತ್ತಿ ಸೀಟಿನಲ್ಲಿ ಕೂರಬೇಕಾಗುತ್ತದೆ. ಆದರೆ ಬಸ್ ನಿಲ್ದಾಣದಿಂದ ಹೊರಟು ಅರ್ಧ ದಾರಿಗೆ ಬಂದ ಮೇಲೆ, ಟಿಕೆಟ್ ನೀಡುವ ಸಮಯದಲ್ಲಿ ನಿರ್ವಾಹಕರು “ಈ ಬಸ್‌ಗೆ ಅರಂತೋಡಿನಲ್ಲಿ ಸ್ಟಾಪ್ ಇಲ್ಲ” ಎಂದು ಬೇಜವಾಬ್ದಾರಿಯ ಉತ್ತರ ನೀಡುತ್ತಿದ್ದಾರೆ. ಇದು ಪ್ರಯಾಣಿಕರನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ.
ಬಸ್ ಸಿಬ್ಬಂದಿ ವಿರುದ್ಧ ದೂರು:
ಇತ್ತೀಚೆಗೆ ಸುಳ್ಯದಿಂದ ಅರಂತೋಡು ಕಡೆಗೆ ಹೊರಟಿದ್ದ  ನೋಂದಣಿ ಸಂಖ್ಯೆಯ ಕೆ.ಎಸ್.ಆರ್.ಟಿ.ಸಿ ಎಕ್ಸ್‌ಪ್ರೆಸ್ ಬಸ್‌ನಲ್ಲಿ ಇದೇ ರೀತಿಯ ಘಟನೆ ಮರುಕಳಿಸಿದೆ. ಅರಂತೋಡಿನಲ್ಲಿ ನಿಲುಗಡೆ ನೀಡದೆ ನೇರವಾಗಿ ಕಲ್ಲುಗುಂಡಿಗೆ ಬಸ್ ಕೊಂಡೊಯ್ಯಲಾಗಿದೆ. ನಿನ್ನೆಯಷ್ಟೇ ಇದೇ ಮಾರ್ಗದ ಎಕ್ಸ್‌ಪ್ರೆಸ್ ಬಸ್‌ಗಳು ಅರಂತೋಡಿನಲ್ಲಿ ಪ್ರಯಾಣಿಕರನ್ನು ಇಳಿಸಿದ್ದವು, ಆದರೆ ಇಂದು ದಿಢೀರನೆ ಚಾಲಕ ಮತ್ತು ನಿರ್ವಾಹಕರು ಬಸ್ ನಿಲ್ಲಿಸಲು ನಿರಾಕರಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಒಂದೊ ಅರಂತೋಡಿನಲ್ಲಿ ಯಾವುದೇ ಎಕ್ಸ್ಪ್ರೆಸ್ ಬಸ್ ಗೆ ಸ್ಟಾಪ್ ನೀಡಬಾರದು, ಅಥವ ನೀಡಿದ್ದರೆ ಎಲ್ಲಾ ಎಕ್ಸ್ಪ್ರೆಸ್ ಬಸ್ ಗಳಿಗೆ ಸ್ಟಾಪ್ ನೀಡಬೇಕು ಎಂದಿದ್ದಾರೆ ಸಾರ್ವಜನಿಕರು.
ವೃದ್ಧರು, ಅನಕ್ಷರಸ್ಥರ ಪರದಾಟ:
ಬಸ್‌ಗಳ ಈ ಅನಿಶ್ಚಿತ ನಿಲುಗಡೆಯಿಂದಾಗಿ ದಿನನಿತ್ಯ ಸಂಚರಿಸುವ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರು ಹಾಗೂ ಅನಕ್ಷರಸ್ಥರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರಂತೋಡಿನಲ್ಲಿ ಇಳಿಯಬೇಕಾದ ವೃದ್ಧರು ಬಸ್ ನಿಲ್ಲಿಸದ ಕಾರಣ ಕಲ್ಲುಗುಂಡಿಯವರೆಗೆ ಹೋಗಿ, ಅಲ್ಲಿಂದ ಮತ್ತೆ ವಾಪಸ್ ಬರಲು ಹಣ ಹಾಗೂ ಸಮಯ ವ್ಯಯಿಸುವಂತಾಗಿದೆ. ಯಾವ ಬಸ್ ನಿಲ್ಲುತ್ತದೆ, ಯಾವುದು ನಿಲ್ಲುವುದಿಲ್ಲ ಎಂಬ ಗೊಂದಲದಿಂದಾಗಿ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಯಾಣಿಕರ ನೇರ ಪ್ರಶ್ನೆ ಹಾಗೂ ಆಗ್ರಹ:
“ಬಸ್ ಹತ್ತುವ ಮುನ್ನ ಕಂಡಕ್ಟರ್ ಸಿಗುವುದಿಲ್ಲ, ಹತ್ತಿದ ಮೇಲೆ ಸ್ಟಾಪ್ ಇಲ್ಲ ಎನ್ನುತ್ತಾರೆ. ನಾವು ನಿತ್ಯವೂ ಸಿಬ್ಬಂದಿಗಳೊಂದಿಗೆ ಜಗಳ ಆಡಲು ಸಾಧ್ಯವೇ? ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು. ಎಕ್ಸ್‌ಪ್ರೆಸ್ ಬಸ್‌ಗಳಿಗೆ ಅರಂತೋಡಿನಲ್ಲಿ ಅಧಿಕೃತ ನಿಲುಗಡೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಬಸ್ ನಿಲ್ದಾಣದ ಬೋರ್ಡ್‌ಗಳಲ್ಲಿ ಸ್ಪಷ್ಟಪಡಿಸಬೇಕು. ಕೆಲ ಬಸ್ ಗಳ ಅದರಲ್ಲೂ ಕುಂದಾಪುರ ಡಿಪೋದ ಒಂದು ಬಸ್ ನ ನಿರ್ವಾಹಕರ ಈ ವರ್ತನೆ ಖಂಡನೀಯ. ಗ್ರಾಮೀಣ ಭಾಗದ ಜನರಿಗೆ ತೊಂದರೆ ಕೊಡುವುದನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು.”

Leave a Reply

Your email address will not be published. Required fields are marked *