ಬೆಂಗಳೂರು: ಸ್ಯಾಂಡಲ್ವುಡ್ನ ಹಿರಿಯ ಹಾಗೂ ಜನಪ್ರಿಯ ನಟ ದೊಡ್ಡಣ್ಣ ಅವರು ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಹರಿದಾಡುತ್ತಿದ್ದು, ಈ ಕುರಿತು ಖುದ್ದಾಗಿ ದೊಡ್ಡಣ್ಣ ಅವರೇ ಸ್ಪಷ್ಟನೆ ನೀಡುವ ಮೂಲಕ ಅಫವಾಹಗಳಿಗೆ ತೆರೆ ಎಳೆದಿದ್ದಾರೆ.

’ಪಬ್ಲಿಕ್ ಫ್ರೆಂಡ್’ ಹೆಸರಿನ ಫೇಸ್ಬುಕ್ ಪುಟವೊಂದರಲ್ಲಿ ನಟ ದೊಡ್ಡಣ್ಣ ಅವರು ಜೂನ್ 12 ರಂದು ವಿಧಿವಶರಾಗಿದ್ದಾರೆ ಎಂದು ಸುಳ್ಳು ಪೋಸ್ಟ್ ಹಾಕಲಾಗಿತ್ತು. ಭಾವಪೂರ್ಣ ಶ್ರದ್ಧಾಂಜಲಿಯ ನಕಲಿ ಪೋಸ್ಟರ್ಗಳು ಫೇಸ್ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದರಿಂದ ಅವರ ಅಭಿಮಾನಿಗಳು ಮತ್ತು ಆತ್ಮೀಯ ವಲಯದಲ್ಲಿ ತೀವ್ರ ಆತಂಕ ಹಾಗೂ ಆಘಾತ ಸೃಷ್ಟಿಯಾಗಿತ್ತು.
ತಾನು ಬದುಕಿರುವಾಗಲೇ ಈ ರೀತಿಯ ಕೀಳು ಮಟ್ಟದ ಶ್ರದ್ಧಾಂಜಲಿ ಪೋಸ್ಟರ್ಗಳನ್ನು ಎಡಿಟ್ ಮಾಡಿ ಸುಳ್ಳು ಸುದ್ದಿ ಹಬ್ಬಿಸಿರುವ ಕಿಡಿಗೇಡಿಗಳ ವಿರುದ್ಧ ನಟ ದೊಡ್ಡಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಪೂರ್ಣ ಆರೋಗ್ಯವಾಗಿದ್ದೇನೆ:
“ನನಗೆ ಏನೂ ಆಗಿಲ್ಲ, ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ಮನೆಯಲ್ಲಿ ನೆಮ್ಮದಿಯಾಗಿ ಚಹಾ ಕುಡಿಯುತ್ತಾ, ಟಿವಿ ನೋಡುತ್ತಾ ಕಾಲ ಕಳೆಯುತ್ತಿದ್ದೇನೆ. ಯಾರೂ ಧೃತಿಗೆಡಬೇಕಾಗಿಲ್ಲ ಹಾಗೂ ಆತಂಕ ಪಡುವ ಅಗತ್ಯವಿಲ್ಲ” ಎಂದು ದೊಡ್ಡಣ್ಣ ಅವರು ಸ್ಪಷ್ಟಪಡಿಸಿದ್ದಾರೆ. ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟರ್ಗಳು ಸಂಪೂರ್ಣ ನಕಲಿಯಾಗಿದ್ದು, ಇಂತಹ ವದಂತಿಗಳನ್ನು ಯಾರೂ ನಂಬಬೇಡಿ ಮತ್ತು ಶೇರ್ ಮಾಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ.
ಹಿರಿಯ ಕಲಾವಿದರ ಆರೋಗ್ಯದ ವಿಷಯದಲ್ಲಿ ಪದೇ ಪದೇ ಇಂತಹ ವಿಕೃತಿ ಮೆರೆಯುತ್ತಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರು ತೀವ್ರವಾಗಿ ಆಗ್ರಹಿಸಿದ್ದಾರೆ.







