
ಸುಳ್ಯದ ನೆಹರೂ ಸ್ಮಾರಕ ಮಹಾವಿದ್ಯಾಲಯದ ಎನ್‌ಸಿಸಿ ಘಟಕದ ವತಿಯಿಂದ 19 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ, ಮಡಿಕೇರಿ ಇದರ ಮಾರ್ಗದರ್ಶನದಲ್ಲಿ ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಕಾಲೇಜಿನ ಆವರಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಸುಳ್ಯದ ಯೋಗ ತರಬೇತುದಾರರಾದ ಶ್ರೀಮತಿ ಉಷಾ ಕೆ. ಅವರು ಉದ್ಘಾಟಿಸಿ ಮಾತನಾಡಿ, ಯೋಗವು ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿ ಹಾಗೂ ಸಮತೋಲನಯುತ ಜೀವನಶೈಲಿಗೆ ಅತ್ಯಂತ ಅಗತ್ಯವಾದ ಸಾಧನವಾಗಿದ್ದು, ಪ್ರತಿಯೊಬ್ಬರೂ ತಮ್ಮ ದೈನಂದಿನ ಬದುಕಿನಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎನ್‌ಸಿಸಿ ಅಸೋಸಿಯೇಟ್ ಅಧಿಕಾರಿ ಕ್ಯಾಪ್ಟನ್ ಸೀತಾರಾಮ ಎಂ.ಡಿ. ಸ್ವಾಗತಿಸಿದರು. ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕರಾದ ಡಾ. ಮಮತಾ ಹಾಗೂ ಬಿಬಿಎ ವಿಭಾಗದ ಮುಖ್ಯಸ್ಥೆ ಶ್ರೀಮತಿ ಅನಂತಲಕ್ಷ್ಮಿ ಉಪಸ್ಥಿತರಿದ್ದರು.
ನಂತರ ಶ್ರೀಮತಿ ಉಷಾ ಕೆ. ಅವರ ನೇತೃತ್ವದಲ್ಲಿ ಯೋಗಾಭ್ಯಾಸ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಯೋಗಾಸನಗಳು ಹಾಗೂ ಪ್ರಾಣಾಯಾಮಗಳನ್ನು ಎನ್‌ಸಿಸಿ ಕೆಡೆಟ್‌ಗಳು ಮತ್ತು ಸಿಬ್ಬಂದಿಗಳು ಅಭ್ಯಾಸ ಮಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದು, ಕಾಲೇಜಿನ ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಯೋಗದ ಮಹತ್ವ ಹಾಗೂ ಆರೋಗ್ಯಕರ ಜೀವನಶೈಲಿಯ ಕುರಿತು ಜಾಗೃತಿ ಮೂಡಿಸಿದ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಕೊನೆಯಲ್ಲಿ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.







