
ಸುಳ್ಯ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ರಾಜ್ಯ ಒಕ್ಕಲಿಗರ ಸಂಘ (ರಿ.) ಬೆಂಗಳೂರು, ಗೌಡರ ಯುವ ಸೇವಾ ಸಂಘ (ರಿ.) ಸುಳ್ಯ, ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಹಾಗೂ ಅರಂತೋಡು ಗ್ರಾಮ ಗೌಡ ಮತ್ತು ಮಹಿಳಾ ಸಮಿತಿಗಳ ಜಂಟಿ ಆಶ್ರಯದಲ್ಲಿ ಜೂನ್ 30, 2026 ರಂದು ಮಂಗಳವಾರ ಅರಂತೋಡಿನ ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನಲ್ಲಿ ನಾಡಪ್ರಭು ಕೆಂಪೇಗೌಡರ 517ನೇ ಜನ್ಮದಿನಾಚರಣೆ ಹಾಗೂ ‘ಕೆಂಪೇಗೌಡ ಪ್ರಶಸ್ತಿ’ ಪ್ರದಾನ ಸಮಾರಂಭ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಶ್ರೀ ಟಿ. ಎಂ. ಶಹೀದ್ ತೆಕ್ಕಿಲ್, ಬೆಂಗಳೂರು ನಗರ ನಿರ್ಮಾಣ ಮತ್ತು ಮಾರುಕಟ್ಟೆಗಳನ್ನು 1537ರಲ್ಲಿಯೇ ಮಣ್ಣಿನ ಕೋಟೆಯನ್ನು ಕಟ್ಟಿ ಬೆಂಗಳೂರು ನಗರವನ್ನು ಸ್ಥಾಪಿಸಿದ ಕೆಂಪೇಗೌಡರು, ಆರ್ಥಿಕ ಚಟುವಟಿಕೆಗಳಿಗಾಗಿ ಪ್ರತ್ಯೇಕ ವಾಣಿಜ್ಯ ಕೇಂದ್ರಗಳನ್ನು ರೂಪಿಸಿದ್ದರು. ಸಾಮಾನ್ಯ ದಿನಸಿಗಳಿಗಾಗಿ ದೊಡ್ಡಪೇಟೆ ಮತ್ತು ಚಿಕ್ಕಪೇಟೆ, ಹತ್ತಿ ವ್ಯಾಪಾರಕ್ಕಾಗಿ ಅರಳೇಪೇಟೆ, ಹಾಗೆಯೇ ಬಳೇಪೇಟೆ, ಅಕ್ಕಿಪೇಟೆ ಮುಂತಾದ ವ್ಯವಸ್ಥಿತ ಮಾರುಕಟ್ಟೆಗಳನ್ನು ನಿರ್ಮಿಸಿದ್ದರು.
ಕೆರೆಗಳ ನಿರ್ಮಾಣ ಮತ್ತು ಜಲ ನಿರ್ವಹಣೆ: ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ಕೃಷಿ ಅಗತ್ಯಗಳನ್ನು ಮನಗಂಡು ಅವರು ನಗರದಾದ್ಯಂತ ನೂರಾರು ಕೆರೆಗಳನ್ನು ನಿರ್ಮಿಸಿದ್ದರು. ಪ್ರಮುಖವಾಗಿ ಕುಡಿಯುವ ನೀರು ಮತ್ತು ಕೃಷಿಗಾಗಿ ಕೆಂಪಾಂಬುಧಿ ಕೆರೆ, ಧರ್ಮಾಂಬುಧಿ ಕೆರೆ ಮತ್ತು ಸಂಪಂಗಿ ಕೆರೆಗಳನ್ನು ನಿರ್ಮಿಸಿ ಸುಸ್ಥಿರ ಜಲ ನಿರ್ವಹಣೆಗೆ ಅಂದೇ ನಾಂದಿ ಹಾಡಿದ್ದರು. ಅವರ ಈ ಅಪಾರ ಕೊಡುಗೆಗಳ ಗೌರವಾರ್ಥವಾಗಿಯೇ ಇಂದು ಬೆಂಗಳೂರಿಗೆ ಕಾಲಿಡುವ ಪ್ರತಿಯೊಬ್ಬರನ್ನು ಸ್ವಾಗತಿಸುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡಲಾಗಿದೆ ಹಾಗೂ ಅವರ 108 ಅಡಿ ಎತ್ತರದ ಭವ್ಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂದು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು. ಅವರ ಹಾಗೇ ನಮ್ಮ ಯುವ ವಿದ್ಯಾರ್ಥಿ ಮಿತ್ರರು, ನಮ್ಮ ನಾಡಿಗೆ ಕೊಡುಗೆ ನೀಡುವಂತ ಧೀಮಂತ ನಾಯಕನಾಗಿ ಬೆಳೆಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದ ಸುಳ್ಯ ಶಾಸಕಿ ಕು| ಭಾಗೀರಥಿ ಮುರುಳ್ಯ 500 ವರ್ಷಗಳ ಹಿಂದೆ ಹಿರಿಯ ಕೆಂಪೇಗೌಡರು ಕಂಡ ದೂರದೃಷ್ಟಿಯ ಫಲವಾಗಿ ಇಂದು ನಮ್ಮ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿದೆ. ಅವರು ಕಟ್ಟಿದ ಈ ಊರು ಕೋಟ್ಯಾಂತರ ಜನರಿಗೆ ಆಶ್ರಯ ನೀಡಿದ್ದು, ಅವರ ಆಶಯದಂತೆ ಎಲ್ಲಾ ಜಾತಿ, ಧರ್ಮದ ಜನರನ್ನು ಒಟ್ಟಿಗೆ ಕರೆದೊಯ್ದು ಈ ನಗರವನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವುದು ನಮ್ಮೆಲ್ಲರ ಆದ್ಯತೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸುಳ್ಯದ ನಿವೃತ್ತ ಕ್ಷೇತ್ರಾಭಿವೃದ್ಧಿ ಅಧಿಕಾರಿ ಶ್ರೀಮತಿ ಎಂ. ಮೀನಾಕ್ಷಿ ಗೌಡ ಅವರಿಗೆ ಪ್ರತಿಷ್ಠಿತ ‘ಕೆಂಪೇಗೌಡ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ನಿವೃತ್ತ ಶಿಕ್ಷಕಿ ಶ್ರೀಮತಿ ಚಂದ್ರಮತಿ ಕೆ. ಅವರು ವಿಶೇಷ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಶ್ರೀ ಸದಾನಂದ ಮಾವಜಿ, ಶ್ರೀ ಭರತ್ ಮುಂಡೋಡಿ, ಶ್ರೀ ಕೆ. ಎಂ. ಮುಸ್ತಫಾ, ಶ್ರೀ ಶಾಹುಲ್ ಹಮೀದ್, ಮತ್ತು ವಿಶೇಷ ಆಹ್ವಾನಿತರಾಗಿ ಶ್ರೀ ಎ. ಸಿ. ವಸಂತ, ಶ್ರೀ ಪಿ. ಎಸ್. ಗಂಗಾಧರ, ವಿದ್ಯಾರಶ್ಮಿ ಸವಣೂರು ಶಾಲಾ ಸಂಚಾಲಕ ಸವಣೂರು ಸೀತರಾಮ ರೈ, ಅರಂತೋಡು ಪದವಿಪೂರ್ವ ಕಾಲೇಜು ಪ್ರಾಂಶುಪಾಲ ರಮೇಶ್, ದಿನೇಶ್ ಮಡಪ್ಪಾಡಿ, ಅರಂತೋಡು ಸಹಕಾರಿ ಸಂಘ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಸೋಮಶೇಖರ ಪಿಂಡಿಮನೆ, ತೀರ್ಥರಾಮ ಅಡ್ಕಬಳೆ ಉಪಸ್ಥಿತರಿದ್ದರು. ತಹಶೀಲ್ದಾರ್ ಶ್ರೀಮತಿ ಮಂಜುಳಾ ಎಂ., ಮತ್ತು ಸ್ಥಳೀಯ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.







