ಪ್ರಥ್ವಿರಾಜ್ ಸುಕುಮಾರನ್ ನಟನೆಯ ‘ದಿ ಗೋಟ್ ಲೈಫ್’ ಮಲಯಾಳಂ ಸಿನಿಮಾ ಸೂಪರ್ ಹಿಟ್ ಆಯಿತು. ‘ಆಡುಜೀವಿತಂ’ ಎನ್ನುವ ಮತ್ತೊಂದು ಹೆಸರು ಚಿತ್ರಕ್ಕಿದೆ. ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಕಟ್ಟಿಕೊಡಲಾಗಿತ್ತು. ಚಿತ್ರದಲ್ಲಿ ನಜೀಬ್ ಅಹಮದ್ ಪಾತ್ರದಲ್ಲಿ ಪೃಥ್ವಿರಾಜ್ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ಆಡುಜೀವಿತಂ’ ಎನ್ನುವ ಕಾದಂಬರಿ ಆಧರಿಸಿ ನಿರ್ದೇಶಕ ಬ್ಲೆಸಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಕೆಲಸಕ್ಕಾಗಿ ಸೌದಿ ಅರೇಬಿಯಾಗೆ ಹೋಗುವ ನಜೀಬ್ ಹಾಗೂ ಆತನ ಸ್ನೇಹಿತ ಹಕೀಮ್ ಸಂಕಷ್ಟಕ್ಕೆ ಸಿಲುಕುತ್ತಾರೆ. ಜನವಸತಿ ಪ್ರದೇಶದಿಂದ ನೂರಾರು ಮೈಲಿ ದೂರ ಮರಳುಗಾಡಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಶೇಖ್ಗಳ ಬಳಿ ಜೀತದ ರೀತಿ ಕುರಿ ಕಾಯುವ ಕೆಲಸ ಮಾಡುವಂತಾಗುತ್ತದೆ. ಅಲ್ಲಿಂದ ತಪ್ಪಿಸಿಕೊಳ್ಳಲು ಬರಲು ಏನೆಲ್ಲಾ ಶ್ರಮ ಪಡುತ್ತಾರೆ ಎನ್ನುವುದೇ ಸಿನಿಮಾ ಕಥೆ.
ಮಾರ್ಚ್ 28ಕ್ಕೆ ತೆರೆಕಂಡ ‘ಆಡುಜೀವಿತಂ’ ಸಿನಿಮಾ ತಿಂಗಳ ಹಿಂದೆ ಓಟಿಟಿಗೂ ಬಂದಿತ್ತು. 80 ಕೋಟಿ ರೂ. ಬಜೆಟ್ ಸಿನಿಮಾ 140 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಮಲಯಾಳಿ ಪ್ರೇಕ್ಷಕರು ಮಾತ್ರವಲ್ಲದೇ ಬೇರೆ ಭಾಷೆಯ ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗಿತ್ತು. ಪಾತ್ರಕ್ಕಾಗಿ ನಟ ಪೃಥ್ವಿರಾಜ್ ಸುಕುಮಾರನ್ ಶ್ರಮ ಕಂಡು ಪ್ರೇಕ್ಷಕರು ಬೆರಗಾಗಿದ್ದರು. 90ರ ದಶಕದಲ್ಲಿ ಕೇರಳ ಮೂಲದ ನಜೀಬ್ ಎಂಬುವವರು ನಿಜವಾಗಿಯೂ ಈ ರೀತಿ ಸಂಕಷ್ಟಕ್ಕೆ ಸಿಲುಕಿದ್ದರು. 3 ವರ್ಷಗಳ ಬಳಿಕ ಅಲ್ಲಿಂದ ತಪ್ಪಿಸಿಕೊಂಡು ನೂರಾರು ಕಿಲೋ ಮೀಟರ್ ನಡೆದು ಬಂದಿದ್ದರು. ಈ ಹಾದಿಯಲ್ಲಿ ಸ್ನೇಹಿತನನ್ನು ಕಳೆದುಕೊಂಡಿದ್ದರು. ಅದೇ ಕಥೆಯನ್ನು ಆಧರಿಸಿ ಮಾಡಿದ ಸಿನಿಮಾ ಪ್ರೇಕ್ಷಕರ ಮನಸೂರೆಗೊಂಡಿತ್ತು. ನಿಜಕ್ಕೂ ಯಾರಿಗಾದರೂ ಇಂತಹ ಸ್ಥಿತಿ ಬಂದರೆ ಹೇಗಿರುತ್ತದೆ ಎಂದು ಊಹಿಸಿಕೊಂಡು ಹುಬ್ಬೇರಿಸಿದ್ದರು.
ಆಡುಜೀವಿತಂ’ ಚಿತ್ರದಲ್ಲಿ ಅರಬ್ ಮೂಲದ ಅಕೇಫ್ ನಜೆಮ್ ಎಂಬುವವರು ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಇದೀಗ ಚಿತ್ರದಲ್ಲಿ ಅಕೇಫ್ ನಜೆಮ್ ಆ ಚಿತ್ರದಲ್ಲಿ ನಾನು ನಟಿಸಿ ತಪ್ಪು ಮಾಡಿಬಿಟ್ಟೆ ಎಂದು ಪಶ್ಚಾತ್ತಾಪ ಪಟ್ಟಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ನನಗೆ ಸಂಪೂರ್ಣ ಕಥೆ ಹೇಳಲಿಲ್ಲ. ನನ್ನ ಪಾತ್ರದ ಬಗ್ಗೆ ಮಾತ್ರ ಹೇಳಿದ್ದರು. ಹಾಗಾಗಿ ಗೊತ್ತಿಲ್ಲದೇ ನಟಿಸಿಬಿಟ್ಟೆ ಕ್ಷಮಿಸಿ ಎಂದು ಮನವಿ ಮಾಡಿದ್ದಾರೆ.
“ಚಿತ್ರದ ನಾಯಕ ಬಹಳ ದಿನಗಳ ಮರುಭೂಮಿಯಲ್ಲಿ ಕಳೆದು ಹೋಗಿರುತ್ತಾನೆ. ಸಾವಿನ ಹಂತ ತಲುಪಿರುವ ಆತನನ್ನು ಒಬ್ಬ ಸೌದಿ ವ್ಯಕ್ತಿ ರಕ್ಷಿಸುತ್ತಾನೆ. ಆ ವ್ಯಕ್ತಿ ನಾನೇ. ಇದನ್ನು ಕೇಳಿ ನಾನು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ. ಇದು ಸೌದಿಗಳ ಶೌರ್ಯ ಮತ್ತು ಮಾನವೀಯತೆಯನ್ನು ಪ್ರತಿಬಿಂಬಿಸುತ್ತದೆ. ಕಷ್ಟದಲ್ಲಿ ಇರುವವರಿಗೆ ನೆರವಾಗುತ್ತೇವೆ. ಆದರೆ ನಾನು ಸಿನಿಮಾ ನೋಡಿದಾಗ ಅದಕ್ಕೆ ವಿರುದ್ಧವಾಗಿದೆ. ಅದೆಲ್ಲಾ ಗೊತ್ತಿದ್ದರೆ ಕಂಡಿತ ನಾನು ನಟಿಸುತ್ತಿರಲಿಲ್ಲ” ಎಂದು ಬರೆದುಕೊಂಡಿದ್ದಾರೆ.
ಸೌದಿಯಲ್ಲಿ ಸಿನಿಮಾ ನೋಡಿದ ಸಾಕಷ್ಟು ಜನ ಈ ಬಗ್ಗೆ ನನ್ನನ್ನು ಪ್ರಶ್ನಿಸುತ್ತಿದ್ದಾರೆ ಎಂದು ನಟ ಅಕೇಫ್ ನಜೆಮ್ ತಿಳಿಸಿದ್ದಾರೆ. ನಾನು ಚಿತ್ರದಲ್ಲಿ ನಟಿಸಿ ತಪ್ಪು ಮಾಡಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.Narayana M Filmibeat
source: filmibeat.com