ಭಾರತ ಕ್ರಿಕೆಟ್ ತಂಡದ 2024ರ ಐಸಿಸಿ ಟಿ20 ವಿಶ್ವಕಪ್ ವಿಜಯೋತ್ಸವದ ಒಂದು ದಿನದ ಬಳಿಕ, ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ಟಿ20 ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್‌ಗಳಿಂದ ಸೋಲಿಸಿದ ಭಾರತ, ತನ್ನ ಎರಡನೇ ಟಿ20 ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯಿತು. ಈ ಮೂಲಕ ಭಾರತೀಯ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿಯನ್ನು ಆಲ್‌ರೌಂಡರ್ ರವೀಂದ್ರ ಜಡೇಜಾ ಅನುಸರಿಸಿದರು. ಏಕೆಂದರೆ, ಭಾರತ ತಂಡವು ತಮ್ಮ ಐಸಿಸಿ ಪ್ರಶಸ್ತಿ ಗೆಲುವಿನ ನಂತರ, ಸಿಬ್ಬಂದಿ ಹಾಗೂ ಕೆಲವು ಆಟಗಾರರನ್ನು ಬದಲಾಯಿಸಲಿದೆ.

ಇತ್ತೀಚಿಗೆ ಮುಕ್ತಾಯಗೊಂಡ 2024ರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ರವೀಂದ್ರ ಜಡೇಜಾ ಉತ್ತಮ ಫಾರ್ಮ್‌ನಲ್ಲಿರಲಿಲ್ಲ. ಆದರೆ ಕಳೆದ ಒಂದು ದಶಕದಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತ ತಂಡದ ಭಾಗವಾಗಿದ್ದರು.

ಸಾರ್ವಕಾಲಿಕ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರೆಂದು ಕರೆಯಲ್ಪಡುವ ರವೀಂದ್ರ ಜಡೇಜಾ ಅವರು ತಮ್ಮ 36ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ತಮ್ಮ ನಿವೃತ್ತಿ ನಿರ್ಧರಿಸಿದರು. “ಕೃತಜ್ಞತೆ ತುಂಬಿದ ಹೃದಯದಿಂದ ನಾನು ಟಿ20 ಅಂತರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳುತ್ತೇನೆ. ಹೆಮ್ಮೆಯಿಂದ ಓಡುವ ದೃಢವಾದ ಕುದುರೆಯಂತೆ, ನಾನು ಯಾವಾಗಲೂ ನನ್ನ ದೇಶಕ್ಕಾಗಿ ನನ್ನ ಅತ್ಯುತ್ತಮವಾದದ್ದನ್ನು ನೀಡಿದ್ದೇನೆ ಮತ್ತು ಇತರ ಸ್ವರೂಪಗಳಲ್ಲಿ ಅದನ್ನು ಮುಂದುವರಿಸುತ್ತೇನೆ. “ಟಿ20 ವಿಶ್ವಕಪ್ ಗೆಲ್ಲುವುದು ನನ್ನ ಕನಸು ನನಸಾಗಿತ್ತು. ಇದು ನನ್ನ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದ ಉತ್ತುಂಗವಾಗಿದೆ. ನೆನಪುಗಳು, ಹರ್ಷೋದ್ಗಾರಗಳು ಮತ್ತು ಅಚಲವಾದ ಬೆಂಬಲಕ್ಕಾಗಿ ಧನ್ಯವಾದಗಳು,” ಎಂದು ರವೀಂದ್ರ ಜಡೇಜಾ ಭಾನುವಾರ, ಜೂನ್ 30ರಂದು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ 2024ರ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವಾಗ ನಿವೃತ್ತಿ ಘೋಷಿಸಿದ್ದರು. ಮತ್ತೊಂದೆಡೆ, ರೋಹಿತ್ ಶರ್ಮಾ ಬಾರ್ಬಡೋಸ್‌ನಲ್ಲಿ ನಡೆದ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಟಿ20 ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದರು.

ಫೈನಲ್ ಪಂದ್ಯದ ನಂತರದ ಭಾಷಣದಲ್ಲಿ ವಿರಾಟ್ ಕೊಹ್ಲಿ ಮುಂದಿನ ಪೀಳಿಗೆಗೆ ತಂಡದ ಜವಾಬ್ದಾರಿ ವಹಿಸಿಕೊಳ್ಳುವ ಸಮಯ ಬಂದಿದೆ ಮತ್ತು ಕ್ರಿಕೆಟ್‌ಗೆ ನಾನು ಚಿರಋಣಿ ಎಂದು ಹೇಳಿದರು.

Leave a Reply

Your email address will not be published. Required fields are marked *