ತಿರುಪತಿ ಲಡ್ಡು ವಿವಾದ ಜೋರಾಗಿದೆ. ತಿರುಪತಿ ಲಡ್ಡು ತಯಾರಿಕೆಯಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಎಪಿ ಸಿಎಂ ಚಂದ್ರಬಾಬು ನಾಯ್ಡು ಹೇಳಿಕೆ ಸಾಕಷ್ಟು ಕೋಲಾಹಲವನ್ನು ಸೃಷ್ಟಿ ಮಾಡಿದೆ. ಈ ನಡುವೆ ಮತ್ತೊಂದು ಭಯಾನಕ ಘಟನೆ ಬೆಳಕಿಗೆ ಬಂದಿದೆ.

ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್ ಕಾಣಿಸಿಕೊಂಡಿದೆ. ಇದು ತಿರುಪತಿ ಲಡ್ಡು ತಯಾರಿಕೆ ಗುಣಮಟ್ಟದ ಬಗ್ಗೆ ಸಾಕಷ್ಟು ಅನುಮಾನಗಳನ್ನು ಹೆಚ್ಚಿಸಿದೆ.

ಹಿಂದೂಗಳ ಅತಿ ಹೆಚ್ಚು ನಂಬಿಕೆಯ ದೇವರು ತಿರುಮಲ ತಿರುಪತಿ ದೇವಸ್ಥಾನದಂತಹ ಸುಪ್ರಸಿದ್ಧ ಪುಣ್ಯಕ್ಷೇತ್ರದಲ್ಲಿ ಭಕ್ತರಿಗೆ ಪ್ರಸಾದವಾಗಿ ನೀಡುವ ತಿರುಪತಿ ಲಡ್ಡುವನ್ನು ಈಗಾಗಲೇ ಅಪವಿತ್ರಗೊಳಿಸುವ ಕೃತ್ಯ ನಡೆದಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದು ಸಮಸ್ತ ಹಿಂದೂಗಳ ಆತಂಕವನ್ನು ಹೆಚ್ಚಿಸಿದೆ. ಈ ನಡುವೆ ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್ ಪತ್ತೆಯಾದ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ನಡೆದಿದೆ. ಹೌದು… ಖಮ್ಮಂ ಜಿಲ್ಲೆಯ ಗ್ರಾಮಾಂತರ ಮಂಡಲ ವ್ಯಾಪ್ತಿಯ ಗೊಲ್ಲಗುಡೆಂ ಪಂಚಾಯತ್ ಕಾರ್ತಿಕೇಯ ಟೌನ್‌ಶಿಪ್‌ನ ನಿವಾಸಿ ದೊಂತು ಪದ್ಮಾವತಿ ಅವರು ಸೆಪ್ಟೆಂಬರ್ 19 ರಂದು ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳಿ ತಿಮ್ಮಪ್ಪನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಹಿಂತಿರುಗುವಾಗ ತನ್ನ ಸಂಬಂಧಿಕರು ಮತ್ತು ನೆರೆಹೊರೆಯವರೊಂದಿಗೆ ಹಂಚಿಕೊಳ್ಳಲು ಶ್ರೀವಾರಿ ಲಡ್ಡು ಪ್ರಸಾದವನ್ನು ತಂದಿದ್ದರು. ಭಾನುವಾರ (ಸೆಪ್ಟೆಂಬರ್ 22) ಪ್ರಸಾದ ಹಂಚಲು ಲಡ್ಡು ತೆಗೆದು ನೋಡಿದಾಗ ಅದರಲ್ಲಿ ಗುಟ್ಕಾ ಪ್ಯಾಕೆಟ್ ಪತ್ತೆಯಾಗಿದೆ.

ಅತ್ಯಂತ ಪವಿತ್ರವಾದ ಲಡ್ಡೂವಿನಲ್ಲಿ ಗೋಡಂಬಿ, ಒಣದ್ರಾಕ್ಷಿ, ಬಾದಾಮಿ ಬರುತ್ತಿರುವುದನ್ನು ನೋಡಿದ ಪದ್ಮಾವತಿಗೆ ಅದೇ ಸಮಯಕ್ಕೆ ಗುಟ್ಕಾ ಪ್ಯಾಕೆಟ್ ಕಂಡು ಆಶ್ಚರ್ಯವಾಗಿದೆ. ಈ ವಿಷಯವನ್ನು ತಮ್ಮ ಕುಟುಂಬಸ್ಥರಿಗೆ ತಿಳಿಸಿ, ಆ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹೀಗೆ ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್ ಸಿಕ್ಕಿರುವುದು ಇದೇ ಮೊದಲಲ್ಲ. 2012ರಲ್ಲೂ ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್ ಕಾಣಿಸಿಕೊಂಡಿತ್ತು ಎಂಬುದು ಗಮನಾರ್ಹ.

ಈಗಾಗಲೇ.. ಲಡ್ಡೂ ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಕಲಬೆರಕೆ ಆಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ನಡುವೆ ಗುಟ್ಕಾ ಪ್ಯಾಕೆಟ್ ಕಾಣಿಸಿಕೊಂಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಲಡ್ಡು ತಯಾರಿಸಲು ತುಪ್ಪ ಎಲ್ಲಾ ಪರೀಕ್ಷೆಗಳ ನಂತರ ಒಳಗೆ ಬರುತ್ತದೆ. ಅದನ್ನು ತಯಾರಕರು ಬಳಸುತ್ತಾರೆ. ಆದರೆ ಗುಟ್ಕಾ ಪ್ಯಾಕೇಟ್ ಎಲ್ಲಿಂದ ಬಂತು ಎನ್ನುವ ಪ್ರಶ್ನೆ ಮೂಡಿದೆ. ಲಡ್ಡುಗಳನ್ನು ತಯಾರಿಸುವಾಗ ಯಾರಾದರೂ ಗುಟ್ಕಾ ಉಪಯೋಗಿಸಿರಬಹುದು.. ಆ ವೇಳೆ ಆ ಪ್ಯಾಕೆಟ್ ಬಿತ್ತಾ? ಅಥವಾ ತಯಾರಕರೇ ನಿರ್ಲಕ್ಷ್ಯದಿಂದ ಲಡ್ಡುವಿನಲ್ಲಿ ಗುಡ್ಕಾ ಪ್ಯಾಕೇಟ್ ಹಾಕಿದ್ರಾ ಎನ್ನುವ ಅನುಮಾನ ಮೂಡಿದೆ.

ಅಷ್ಟಕ್ಕೂ ಲಡ್ಡು ತಯಾರಿಸುವ ಸ್ಥಳದಲ್ಲಿ ಯಾರು ಗುಟ್ಕಾ ಬಳಸುತ್ತಾರೆ ಎನ್ನುವ ಪ್ರಶ್ನೆ ಕೂಡ ಸೃಷ್ಟಿಯಾಗಿದೆ. ಯಾಕೆಂದರೆ ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲ್ಪಟ್ಟಿರುವ ತಿರುಮಲದಲ್ಲಿ ಗುಟ್ಕಾಗಳು, ಮದ್ಯಪಾನ, ಧೂಮಪಾನ ಮತ್ತು ಮಾಂಸವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹೀಗಿದ್ದರೂ ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್ ಹೇಗೆ ಬಂತು? ಎಂಬುವ ಪ್ರಶ್ನೆ ಕೂಡ ಎದುರಾಗಿದೆ.

ಇದು ಅಲ್ಲಿ ಕೆಲಸ ಮಾಡುವ ಕೆಲ ಸಿಬ್ಬಂದಿಯ ಮೇಲೆ ಅನುಮಾನವನ್ನು ಹೆಚ್ಚಿಸಿದೆ. ಲಡ್ಡು ತಯಾರಿಸುವ ಸಿಬ್ಬಂದಿಗಳು ದುಶ್ಚಟಗಳಿಗೆ ಒಳಗಾಗಿರಬಹುದು. ಹೀಗಾಗಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೇಟ್ ಸಿಕ್ಕಿದೆ ಎಂದು ಕೆಲವರು ಶಂಕಿಸಿದ್ದಾರೆ. ಇನ್ನೂ ಕೆಲವರು ಇದೆಲ್ಲ ನಿಜವೇ ಎಂಬ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಕಲಬೆರಕೆ ತುಪ್ಪದ ವಿವಾದ ಜೋರಾದ ಹೊತ್ತಿನಲ್ಲಿ ಕೆಲವರು ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಲಡ್ಡು ತಯಾರಿಕೆಯ ಗುಣಮಟ್ಟದ ಬಗ್ಗೆ ಸದ್ಯ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದೆ. ಇದಕ್ಕಾಗಿ ತಿರುಪತಿಯಲ್ಲಿ ಶಾಂತಿ ಹೋಮ ಮಾಡಿಸಲಾಗುತ್ತಿದೆ. ತುಪ್ಪ ಬಳಸುವ ಹಾಗೂ ಅನ್ನ ಪ್ರಸಾದ ತಯಾರಿಸುವ ಸ್ಥಳ ಹಾಗೂ ಗರ್ಭಗುಡಿಯಲ್ಲಿ ಪಂಚಗವ್ಯ ಸಂಪ್ರೋಕ್ಷಣ ಮಾಡಲಾಗುತ್ತಿದೆ.

 

Leave a Reply

Your email address will not be published. Required fields are marked *