ಕಳ್ಳತನ, ವಂಚನೆ ಪ್ರಕರಣಗಳು ಈಗೀಗ ಹೆಚ್ಚಾಗುತ್ತಲೇ ಇವೆ. ಶಾಕಿಂಗ್ ಸಮಾಚಾರ ಅಂದರೆ ದೊಡ್ಡ ದೊಡ್ಡವರ ಹೆಸರನ್ನೇಳಿಕೊಂಡು ದೊಡ್ಡ ದೊಡ್ಡವರಿಗೆ ಪಂಗನಾಮ ಹಾಕುವ ಬೆಳವಣಿಗೆಗಳೂ ಕೂಡ ಹೆಚ್ಚುತ್ತಿವೆ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಅವರ ಫೋಟೋ ಉಪಯೋಗಿಸಿಕೊಂಡು ಗುಜರಾತ್‌ನ ಅಹಮದಾಬಾದ್‌ನ ಚಿನ್ನದ ವ್ಯಾಪಾರಿಗೆ ಇಬ್ಬರು 1.30 ಕೋಟಿ ಉಂಡೆನಾಮ ತಿಕ್ಕಿದ್ದಾರೆ. ಹೌದು, ಕೇಳಲು ಇದು ವಿಚಿತ್ರವಾದರೂ ಸತ್ಯ. ಅಹಮದಾಬಾದ್‌ನ ಮಾಣಿಕ್ ಚೌಕ್‌ನ ಚಿನ್ನದ ವ್ಯಾಪಾರಿ ಮೆಹುಲ್ ಠಕ್ಕರ್ ಅವರ ಬಳಿ ಎರಡು ಕೆಜಿ ಚಿನ್ನ ಖರೀದಿಗೆ ಖತರ್ನಾಕ್ ಕಳ್ಳರಿಬ್ಬರು 1.60 ಕೋಟಿಗೆ ಒಪ್ಪಂದ ಮಾಡಿಕೊಂಡಿದ್ದರು. ಅದ್ರಂತೆ ಮೊದಲ ಕಂತಿನಲ್ಲಿ 1.30 ಕೋಟಿ ಎರಡನೇ ಕಂತಿನಲ್ಲಿ 30 ಲಕ್ಷ ಕೊಡುವುದಾಗಿ ಹೇಳಿದ್ದರು. ಆ ನಂತರ ಕೊಟ್ಟಿರುವ ಮಾತಿನಂತೆ 1.30 ಕೋಟಿ ಹಣ ನೀಡಲು ಬ್ಯಾಗ್ ಸಮೇತ ಬಂದಿದ್ದರು. ಆದರೆ, ಆ ಬ್ಯಾಗ್ ನಲ್ಲಿ ಅಸಲಿ ಹಣವನ್ನು ಇಡದ ಇಬ್ಬರು ಮೆಹುಲ್ ಠಕ್ಕರ್ ಅವರನ್ನು ನಂಬಿಸಲು 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳ ಮೇಲೆ ಕೆಲ ಅಸಲಿ ನೋಟುಗಳನ್ನು ಇಟ್ಟಿದ್ದರು. ಆ ನಂತರ ಮೆಹುಲ್ ಠಕ್ಕರ್ ಅವರ ನಂಬಿಕೆಯನ್ನು ಗಳಿಸಿದ ಇಬ್ಬರು, ಇನ್ನೊಂದು ಅಂಗಡಿಯಲ್ಲಿ ಚಿನ್ನ ಖರೀದಿಸಬೇಕಿದೆ ಎಂದು ಕಾಲ್ಕಿತ್ತರು.
ಹೀಗೆ ಹಣ ಸಿಕ್ಕ ಖುಷಿಯಲ್ಲಿ ಯಂತ್ರದ ಸಹಾಯದಿಂದ ಹಣ ಎಣಿಸಲು ಮೆಹುಲ್ ಠಕ್ಕರ್ ಮತ್ತು ಅಂಗಡಿಯಲ್ಲಿ ಕೆಲಸ ಮಾಡುವ ಉದ್ಯೋಗಿ ಭರತ್ ಜೋಶಿ ಮುಂದಾಗಿದ್ದಾರೆ. 26 ಕಟ್ಟುಗಳಿದ್ದ 500 ರೂಪಾಯಿಯಲ್ಲಿ ಮಹಾತ್ಮಾ ಗಾಂಧೀಜಿಯ ಬದಲು ಅನುಪಮ್ ಖೇರ್ ಫೋಟೋ ಕಂಡು ಬೆಚ್ಚಿ ಬಿದ್ದಿದ್ದಾರೆ. ಅಹಮದಾಬಾದ್‌ನ ನವರಂಗ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೆಪ್ಟೆಂಬರ್ 24ರಂದು ಈ ವಂಚನೆ ನಡೆದಿದ್ದು ಸದ್ಯ ಮೆಹುಲ್ ಠಕ್ಕರ್ ಅವರ ಅಂಗಡಿಯ ಬಳಿ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಇಬ್ಬರು ಆರೋಪಿಗಳನ್ನು ಗುರುತಿಸಿದ್ದಾರೆ. ಬಂಧನಕ್ಕೆ ಬೆಲೆ ಬೀಸಿದ್ದಾರೆ.
ಸದ್ಯಕ್ಕೆ ಅನುಪಮ್ ಖೇರ್ ಫೋಟೋ ಇರುವ 500 ರೂಪಾಯಿ ಮುಖಬೆಲೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಟ್ರೋಲಿಗರಿಗೆ ಆಹಾರವೂ ಆಗಿದೆ. ಇನ್ನೂ ಮಹಾತ್ಮಾ ಗಾಂಧಿ ಅವರ ಬದಲು ತಮ್ಮ ಭಾವಚಿತ್ರವನ್ನು 500 ರೂಪಾಯಿ ಮೇಲಿರುವುದನ್ನು ನೋಡಿರುವ ಅನುಪಮ್ ಖೇರ್, ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಈ ಪ್ರಕರಣದ ಕುರಿತು ಬರೆದುಕೊಂಡಿದ್ಧಾರೆ.ಇದೊಳ್ಳೆ ಕಥೆ ಐನೂರು ರೂಪಾಯಿ ಫೋಟೊ ಮೇಲೆ ಗಾಂಧೀಜಿಯ ಬದಲು ನನ್ನ ಫೋಟೊ, ಇಲ್ಲಿ ಏನ್ ಬೇಕಾದರೂ ಆಗಬಹುದು ಎಂದಿದ್ದಾರೆ. ಟಿವಿ9 ಗುಜರಾತ್ ನ ವರದಿಯನ್ನೂ ಕೂಡ ಅನುಪಮ್ ಖೇರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಉಳಿದಂತೆ ಅನುಪಮ್ ಖೇರ್ ಈಗೀಗ ಕೇವಲ ಹಿಂದಿ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗದೇ ದಕ್ಷಿಣ ಭಾರತೀಯ ಚಿತ್ರಗಳಲ್ಲಿ ಕೂಡ ಅಭಿನಯಿಸುತ್ತಿದ್ದಾರೆ. ಡಾ.ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಬಂದಿದ್ದ ಅನುಪಮ್ ಖೇರ್ ಸದ್ಯ ಮೆಟ್ರೋ ಇನ್ ದಿನೋ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ಧಾರೆ. ಇನ್ನೂ ಅನು ಕಪೂರ್ ಜೊತೆ ದಿ ಸಿಗ್ನೇಚರ್ ಚಿತ್ರದಲ್ಲಿ ಕೂಡ ಅನುಪಮ್ ಖೇರ್ ಅಭಿನಯಿಸಿದ್ದು ಈ ಚಿತ್ರ ಈ ಅಕ್ಟೋಬರ್ 04ರಂದು ಜಿ5 ನಲ್ಲಿ ಪ್ರಸಾರವಾಗಲಿದೆ.