ಸುಳ್ಯದ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿಯ ವತಿಯಿಂದ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಕಳೆದ ಎಂಟು ದಿನಗಳಿಂದ ವಿವಿಧ ವೈದಿಕ, ಧಾರ್ಮಿಕ – ಸಾಂಸ್ಕೃತಿಕ ಸಭಾ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಜರುಗಿದ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ಸುಳ್ಯ ದಸರಾ -2024 ಇಂದು ಸಂಜೆ ಶ್ರೀ ಶಾರದಾ ದೇವಿಯ ವಿಜೃಂಭಣೆಯ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಳ್ಳಲಿದೆ.

ಮಧ್ಯಾಹ್ನ 12ಕ್ಕೆ ಶ್ರೀದೇವಿಗೆ ಮಹಾಪೂಜೆ ಜರುಗಲಿದ್ದು, ಸಂಜೆ ಶ್ರೀ ಶಾರದಾ ದೇವಿಯ ವಿಜೃಂಭಣೆಯ ಶೋಭಾಯಾತ್ರೆಯು ವಿದ್ಯುತ್ ದೀಪಾಲಂಕೃತ ವಾಹನದಲ್ಲಿ ಹತ್ತು ಹಲವಾರು ಚಲಿಸುವ ಸ್ಥಬ್ಧಚಿತ್ರಗಳು, ಹುಲಿವೇಷ ಕುಣಿತ, ಕುಣಿತ ಭಜನೆ, ಡಿ.ಜೆ. ಅಬ್ಬರದೊಂದಿಗೆ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಹೊರಟು, ಕೆವಿಜಿ ಸರ್ಕಲ್, ವಿವೇಕಾನಂದ ವೃತ್ತ, ಯುವಜನ ಸಂಯುಕ್ತ ಮಂಡಳಿ ಬಳಿಯಾಗಿ ಸಾಗಿ ಶ್ರೀರಾಂಪೇಟೆ, ವಿದ್ಯಾನಗರ, ಹಳೆಗೇಟು, ಓಡಬಾಯಿ, ತನಕ ಸಂಚರಿಸಿ, ಮರಳಿ ಲಾಲ್ ಬಹದ್ದೂ‌ರ್ ಶಾಸ್ತ್ರಿ ವೃತ್ತದ ಮೂಲಕ ಶ್ರೀರಾಂಪೇಟೆ, ಜಟ್ಟಿಪಳ್ಳ ಜಂಕ್ಷನ್, ಖಾಸಗಿ ಬಸ್‌ ನಿಲ್ದಾಣ, ಪೊಲೀಸ್ ಠಾಣೆ, ಮಿತ್ತೂರು ನಾಯ‌ರ್ ಕಟ್ಟೆ, ಗಾಂಧಿನಗರ, ವಿಷ್ಣುಸರ್ಕಲ್ ತನಕ ಸಾಗಿ ಮರಳಿ ರಥಬೀದಿಯಲ್ಲಿ ಸಂಚರಿಸಿ, ಕಾಂತಮಂಗಲದ ಬಳಿ ಪಯಸ್ವಿನಿ ನದಿಯಲ್ಲಿ ಜಲಸ್ಥಂಭನಗೊಳ್ಳಲಿದೆ.

ಸುಳ್ಯ ನಗರದ ಪ್ರಮುಖ ರಸ್ತೆಯಲ್ಲಿ ಇಂದು ಶ್ರೀದೇವಿಯ ಶೋಭಾಯಾತ್ರೆಯ ಕಾರಣ ಟ್ರಾಫಿಕ್ ಸಮಸ್ಯೆ ಎದುರಾಗುವ ಕಾರಣ ಅಪರಾಹ್ನ 3ರಿಂದ ಮಧ್ಯರಾತ್ರಿ ಶೋಭಾಯಾತ್ರೆ ಮುಗಿಯುವ ತನಕ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಳ್ಯದ ಮುಖ್ಯರಸ್ತೆಯಲ್ಲಿ ಮಾರ್ಗ ಬದಾಯಿಸಿ, ಸಂಚರಿಸುವಂತೆ ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರು ಆದೇಶ ಹೊರಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರು ಅಪರಾಹ್ನ 3 ಗಂಟೆಯ ಬಳಿಕ ಕಟ್ಟೆಕ್ಕಾರ್ ಜಂಕ್ಷನ್ ನಿಂದ ರಥಬೀದಿಯಲ್ಲಿ ಸಾಗಿ ವಿವೇಕಾನಂದ ಸರ್ಕಲ್ ಮೂಲಕ ಕಾಂತಮಂಗಲ, ಅಜ್ಜಾವರ – ಪೇರಾಲು ಅಡ್ಕಾರು ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಂಚರಿಸುವಂತೆ ಆದೇಶ ಹೊರಡಿಸಿದ್ದಾರೆ. ಸುಳ್ಯ ಪೊಲೀಸ್‌ ಇಲಾಖೆಯ ವತಿಯಿಂದ ವಾಹನ ಸಂಚಾರ ವ್ಯವಸ್ಥೆ ನಡೆಯಲಿದೆ.

Leave a Reply

Your email address will not be published. Required fields are marked *