ಉತ್ತರ ಪ್ರದೇಶದ ನೋಯ್ಡಾದ ಬಹುಮಹಡಿ ಕಟ್ಟಡವೊಂದರಿಂದ ಜಿಗಿದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಸೋಮವಾರ (ಅಕ್ಟೋಬರ್ 21) ನಡೆದಿದೆ. ಸಮೀಪದಲ್ಲಿದ್ದವರು ಕ್ಷಿಪ್ರವಾಗಿ ಕಾರ್ಯ ಪ್ರವೃತ್ತರಾಗಿದ್ದರಿಂದ ಈತನನ್ನು ರಕ್ಷಿಸಲಾಗಿದ್ದು, ಸದ್ಯ ಈ ವಿಡಿಯೊ ವೈರಲ್ ಆಗಿದೆ (Viral News).
ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ (Viral Video).
21 ವರ್ಷದ ಯುವಕ ನೋಯ್ಡಾದ ಸೂಪರ್ಟೆಕ್ ಕೇಪ್ಟೌನ್ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಲು ಯತ್ನಿಸಿದವನು. ಈ ಹಿಂದೆ ಈತ ಇಲ್ಲಿ ವಾಸಿಸುತ್ತಿದ್ದ. ಕೆಲವು ದಿನಗಳ ಹಿಂದೆ ಈತ ಇಲ್ಲಿಂದ ಬೇರೆ ಕಡೆಗೆ ಕುಟುಂಬ ಸಮೇತ ಸ್ಥಳಾಂತರಗೊಂಡಿದ್ದ. ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಅಪಾರ್ಟ್ಮೆಂಟ್ಗೆ ಆಗಮಿಸಿ 12ನೇ ಮಹಡಿಯಿಂದ ಜಿಗಿಯಲು ಯತ್ನಿಸಿದ್ದಾನೆ.
ವಿಡಿಯೊದಲ್ಲಿ ಏನಿದೆ?
ಸದ್ಯ ಈತನ ವಿಡಿಯೊ ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತದೆ. ಈತ ಆತ್ಮಹತ್ಯೆ ಮಾಡಿಕೊಳ್ಳಲು ಕಟ್ಟಡದ ಅಂಚಿಗೆ ತೆರಳುತ್ತಿರುವುದನ್ನು ಗಮನಿಸಿದ ವ್ಯಕ್ತಿಯೊಬ್ಬರು ಸಮೀಪದಲ್ಲಿದ್ದವರಿಗೆ ಎಚ್ಚರಿಕೆ ನೀಡಿದ್ದರು. ಕೂಡಲೇ ಇತರರು ಧಾವಿಸಿ ಬಂದು ನೋಡಿದಾಗ ಈತನ ದೇಹ ಕಟ್ಟಡದ ಅಂಚಿನಲ್ಲಿ ನೇತಾಡುತ್ತಿತ್ತು. ಎರಡೂ ಕೈಗಳಲ್ಲಿ ಕಟ್ಟಡದ ಅಂಚನ್ನು ಹಿಡಿದುಕೊಂಡಿದ್ದ. ಇನ್ನೇನು ಜಿಗಿಯಬೇಕು ಎನ್ನುವಷ್ಟರಲ್ಲಿ ನೆರೆಹೊರೆಯವರು ಈತನನ್ನು ಮೇಲಕ್ಕೆ ಎಳೆದು ರಕ್ಷಿಸಿದ್ದಾರೆ. ಸದ್ಯ ಈತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಮಾಹಿತಿ ಕಲೆ ಹಾಕಿದ್ದಾರೆ.
ʼʼನೋಯ್ಡಾ ಸೆಕ್ಟರ್ 74ರ ಸೂಪರ್ಟೆಕ್ ಕೇಪ್ಟೌನ್ ಅಟಾರ್ಟ್ಮೆಂಟ್ನ ಮಾಜಿ ನಿವಾಸಿ 21 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಅದೃಷ್ಟವಶಾತ್ ಸಮೀಪದಲ್ಲಿದ್ದವರ ಸಹಾಯದಿಂದ ಬದುಕುಳಿದಿದ್ದಾನೆ. ಸಮಯಕ್ಕೆ ಸರಿಯಾಗಿ ಈತನನ್ನು ಅಟಾರ್ಟ್ಮೆಂಟ್ ನಿವಾಸಿಗಳು ರಕ್ಷಿಸಿದ್ದಾರೆ. ಉದ್ಯೋಗ ಕಳೆದುಕೊಂಡ ಹಿನ್ನೆಲೆಯಲ್ಲಿ ಈತ ಈ ಕೃತ್ಯಕ್ಕೆ ಕೈ ಹಾಕಿದ್ದʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮನೆಯವರ ಕಣ್ತಪ್ಪಿಸಿ ಈತ ಇಲ್ಲಿಗೆ ಆಗಮಿಸಿದ್ದ ಎನ್ನಲಾಗಿದೆ. ಸದ್ಯ ಈತ ಚೇತರಿಸಿಕೊಳ್ಳುತ್ತಿದ್ದಾನೆ. ಈತನಿಗೆ ಮಾನಸಿಕ ಸಮಸ್ಯೆ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಸದ್ಯ ಈ ವಿಡಿಯೊವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ದೇವರಂತೆ ಬಂದು ಅಪಾರ್ಟ್ಮೆಂಟ್ ನಿವಾಸಿಗಳು ಈತನನ್ನು ಕಾಪಾಡಿದ್ದಾರೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಜತೆಗೆ ಅವರ ಸಮಯೋಚಿತ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ʼʼಓ ಮೈ ಗಾಡ್. ಸಮಯಕ್ಕೆ ಸರಿಯಾಗಿ ಬಂದು ರಕ್ಷಿಸಿದ್ದೀರಿʼʼ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಜತೆಗೆ ಕೈಮುಗಿಯುವ ಇಮೋಜಿ ಬಳಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʼʼವಿಡಿಯೊ ನೋಡಿ ಮೈಜುಮ್ಮೆಂದಿದೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಒಂದು ಕ್ಷಣ ನನ್ನ ಹೃದಯ ಬಡಿತವೇ ನಿಂತಂತಾಯ್ತುʼʼ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ʼʼಸ್ವಲ್ಪ ತಡವಾಗಿದ್ದರೂ ಆತನ ಪ್ರಾಣಪಕ್ಷಿ ಹಾರಿ ಹೋಗಿರುತ್ತಿತ್ತು. ಸಮಯಕ್ಕೆ ಸರಿಯಾಗಿ ಬಂದು ಕಜಾಪಾಡಿದವರಿಗೆ ಹ್ಯಾಟ್ಸಾಫ್ʼʼ ಎಂದು ಮಗದೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.