ಭಾರತೀಯ ಎಲೆಕ್ಟ್ರಿಕ್ ಕಂಪನಿ ಬಿಪಿಎಲ್ ಸಮೂಹದ ಸಂಸ್ಥಾಪಕ ಟಿ.ಪಿ. ಗೋಪಾಲನ್ ನಂಬಿಯಾರ್ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ನಂಬಿಯಾರ್ ಅವರಿಗೆ ಕೆಲ ಸಮಯದಿಂದ ಆರೋಗ್ಯ ಸರಿ ಇರಲಿಲ್ಲ. ಇಂದು ಬೆಳಿಗ್ಗೆ 10.15ರ ಸುಮಾರಿಗೆ ಅವರು ನಿಧನರಾಗಿದ್ದಾರೆ ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಟಿಪಿಜಿ ಎಂದೇ ಹೆಸರುವಾಸಿಯಾಗಿದ್ದ ನಂಬಿಯಾರ್ ಅವರು, ಬಿಜೆಪಿ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಅವರ ಮಾವ.
ಅವರಿಗೆ ಪತ್ನಿ ತಂಕಮ್, ಪುತ್ರ ಅಜಿತ್, ಪುತ್ರಿ ಅಂಜು ಇದ್ದಾರೆ.
ಕೇರಳದ ಪಾಲಕ್ಕಾಡ್ನಲ್ಲಿ ಜನಿಸಿದ ಅವರು, ರಕ್ಷಣಾ ದಳಕ್ಕೆ ಉಪಕರಣ ಪೂರೈಕೆ ಮಾಡಲು ಬ್ರಿಟಿಷ್ ಫಿಸಿಕಲ್ ಲ್ಯಾಬೊರೇಟರೀಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಅನ್ನು (ಬಿಪಿಎಲ್) 1963ರಲ್ಲಿ ಸ್ಥಾಪಿಸಿದರು. 70 ಮತ್ತು 80ರ ದಶಕದಲ್ಲಿ ಈ ಉತ್ಪನ್ನಗಳ ತಯಾರಿಕೆಯನ್ನು ಬ್ರಿಟನ್ ಮತ್ತು ಅಮೆರಿಕಕ್ಕೂ ವಿಸ್ತರಿಸಿದರು. ಗುಣಮಟ್ಟದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕೆಯಿಂದಾಗಿ ಕಂಪನಿಯ ಹೆಸರು ಮನೆ ಮಾತಾಯಿತು.
ಟಿಪಿಜಿ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದ್ದು, ಐಕಾನಿಕ್ ಬಿಪಿಎಲ್ ಬ್ರಾಂಡ್ನ ಸಂಸ್ಥಾಪಕ ಟಿಪಿಜಿ ನಂಬಿಯಾರ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಟಿಪಿಜಿ ಅವರು ದೀರ್ಘಕಾಲದಿಂದ ಪರಿಚಯವಿದ್ದರು. ಅವರ ಅಗಾಧ ಕೊಡುಗೆ ಮತ್ತು ಪರಂಪರೆ ಸದಾ ಸ್ಮರಣೀಯ ಎಂದು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.