ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೆ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ರೋಹಿತ್ ಶರ್ಮಾ ಅವರು ಗಂಡು ಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ. ರೋಹಿತ್ ಶರ್ಮಾ ಮತ್ತು ರಿತಿಕಾ ಸಜ್ದೆ ದಂಪತಿಗೆ ಗಂಡು ಮಗು ಜನಿಸಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಸಂತಸ ವಿಚಾರದ ಬಗ್ಗೆ ಹಿಟ್‌ಮ್ಯಾನ್ ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ ಜೂನಿಯರ್ ಹಿಟ್‌ಮ್ಯಾನ್ ಆಗಮನಕ್ಕೆ ರೋಹಿತ್ ಶರ್ಮಾ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾರೈಸುತ್ತಿದ್ದಾರೆ.
ರೋಹಿತ್ ಶರ್ಮಾ ಮತ್ತು ರಿತಿಕಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಈ ಮೊದಲೇ ವರದಿಯಾಗಿತ್ತು. ಹೀಗಾಗಿ ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲೆರೆಡು ಪಂದ್ಯಗಳಿಂದ ದೂರ ಉಳಿಯಬಹುದು ಎನ್ನಲಾಗಿತ್ತು. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಜೊತೆ ಆಸ್ಟ್ರೇಲಿಯಾ ಪ್ರವಾಸಕ್ಕೆ ರೋಹಿತ್ ಶರ್ಮಾ ಪ್ರಯಾಣಿಸಿರಲಿಲ್ಲ. ತಮ್ಮ ಎರಡನೇ ಮಗು ಮತ್ತು ಪತ್ನಿ ಜೊತೆಗ ಸಮಯ ಕಳೆಯಲು ಅವರು ಮುಂಬೈನಲ್ಲೇ ಉಳಿದುಕೊಂಡಿದ್ದರು.
ಶುಕ್ರವಾರ ರಿತಿಕಾ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗುವಿದ್ದು, ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಈಗ ಗಂಡು ಮಗುವಿಗೆ ರೋಹಿತ್ ಶರ್ಮಾ ತಂದೆಯಾಗಿರುವುದು ಅವರ ಕುಟುಂಬಸ್ಥರಿಗೆ ಸಂತಸ ತಂದಿದೆ.