ಉತ್ತಮ ಹಾದಿಯಲ್ಲಿ ಬೆಳೆದು ಬಂದ ಬಡವರ,ನಿರ್ಗತಿಕರ ಆಶಾ ಕೇಂದ್ರ
ಸುಳ್ಯದ ಪೈಚಾರಿ ನಲ್ಲಿ ಕಳೆದ 18 ವರ್ಷಗಳ ಹಿಂದೆ ಸ್ಥಳೀಯ ಜಮಾಅತಿನ ಬಡ ನಿವಾಸಿಗಳ ಆಶಾ ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದ ಸಂಸ್ಥೆಯಾಗಿದೆ ಅಲ್ ಅಮೀನ್ ಯೂತ್ ಸೆಂಟರ್.
ಆರಂಭದಲ್ಲಿ ಹನ್ನೊಂದು ಮಂದಿಯ ಸ್ಥಳೀಯ ಯುವಕರ ತಂಡವು ರೂಪಿಸಿದ ಈ ಸಂಸ್ಥೆಯು ನಿರಂತರ ಸಾಮಾಜಿಕ ಸೇವೆಗಳ ಮೂಲಕ ಬಡ ಜನರ ಕಷ್ಟ ಕಾರ್ಪಣ್ಯದ ಸಮಯದಲ್ಲಿ ಸಹಾಯ ಹಸ್ತವನ್ನು ನೀಡುತ್ತಾ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವಂತಹ ಅತ್ಯುತ್ತಮ ಸಂಘಟನೆಯಾಗಿ ಇಂದು ಜನರ ಮನಗಳನ್ನು ಬೆಸೆದು ನಿಂತಿದೆ.
ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ಸಹಾಯವನ್ನು ನೀಡಿ ಬಲ ತುಂಬುವ, ವಿದ್ಯಾರ್ಥಿಗಳಿಗೆ ಪುಸ್ತಕ ಪರಿಕರಗಳ ವಿತರಣೆ, ಬ್ಯಾಗ್ ಕೊಡೆಗಳ ವಿತರಣೆ, ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿ ಪ್ರೋತ್ಸಾಹಿಸುವಿಕೆ ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ.
ಅದರೊಂದಿಗೆ ಸ್ಥಳೀಯ ಬಡ ಹೆಣ್ಣು ಮಕ್ಕಳ ವಿವಾಹ ಸಮಾರಂಭಕ್ಕೆ ಆರ್ಥಿಕವಾಗಿ ನೆರವು ನೀಡುವುದು, ಪವಿತ್ರ ರಂಜಾನ್ ತಿಂಗಳಲ್ಲಿ ಬಡ ಜನತೆಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡುವುದು, ವರ್ಷಂಪ್ರತೀ ಸಾಮೂಹಿಕ ಸುನ್ನತ್ ಕಾರ್ಯಕ್ರಮ ನಡೆಸುವುದು ಈ ರೀತಿಯ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದೆ.
ವಿಶೇಷವಾಗಿ ಪರಿಸರ ದಿನಾಚರಣೆಯ ಅಂಗವಾಗಿ ವರ್ಷಂ ಪ್ರತೀ ಸುಳ್ಯ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸಸಿ ಗಳ ವಿತರಣೆ ಗಿಡ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಸರ ಸ್ನೇಹವನ್ನು ಬೆಳೆಸಿಕೊಂಡು ಬಂದಿದೆ. ಪರಿಸರದ ಜನರ ಆರೋಗ್ಯ ರಕ್ಷಣೆಗಾಗಿ ಉಚಿತ ಆರೋಗ್ಯ ತಪಾಷಣಾ ಶಿಬಿರ, ರಕ್ತದಾನ ಶಿಬಿರ,ಬಡ ರೋಗಿಗಳ ಮನೆ ಸಂದರ್ಶನೆ ಮುಂತಾದ ಚಟುವಟಿಕೆಗಳಿಂದ ಜನ ಮಾನಸದಲ್ಲಿ ಬೆಳೆದು ನಿಂತಿದೆ.
ವಿಶ್ವಕ್ಕೆ ಶಾಪವಾಗಿ ಬಂದ ಕೊರೋನಾ ಮಹಾಮಾರಿ ಸಂದರ್ಭದಲ್ಲಿ ಸ್ಥಳೀಯ ಜನರ ಸಹಾಯಕ್ಕಾಗಿ ಕಠಿಣ ಪರಿಶ್ರಮ ವಹಿಸಿದ ಈ ಸಂಸ್ಥೆಯು ದಾನಿಗಳ ಸಹಕಾರ ಪಡೆದು ಸುಮಾರು 5 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡುವ ಮೂಲಕ ಜಾತಿ ಮತ ಭೇದವನ್ನು ಮೀರಿ ಸಹಾಯ ಹಸ್ತವನ್ನು ನೀಡಿದೆ.
ಬಹುತೇಕ ಯುವಕರನ್ನೇ ಹೊಂದಿರುವ ಈ ಸಂಸ್ಥೆಯು ಪ್ರಾಕೃತಿಕ ವಿಕೋಪ,ಜಲ ಪ್ರಳಯ ಮುಂತಾದ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನರ ರಕ್ಷಣೆಗೆ ಮತ್ತು ಅವರ ಸಹಾಯಕ್ಕೆ ಕೊಡಗು ಜಿಲ್ಲೆಯ ಪ್ರದೇಶಗಳಿಗೆ ಸ್ಥಳೀಯ ಇತರ ಸಂಘಟನೆಗಳ ಜೊತೆಗೂಡಿ ರಕ್ಷಣಾ ಕೆಲಸ ಕಾರ್ಯದಲ್ಲಿ ತೊಡಗಿಸಿಕ್ಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ
ಧಾರ್ಮಿಕವಾಗಿಯೂ ಕಾರ್ಯ ಚಟುವಟಿಕೆಗಳನ್ನು ರೂಪಿಸಿಕೊಂಡಿರುವ ಈ ಸಂಸ್ಥೆ ತಮ್ಮ ಪರಿಸರದ ಮಸೀದಿಯಲ್ಲಿ ಮಾಸಿಕ ಸ್ವಲಾತ್ ಮತ್ತು ವಾರ್ಷಿಕ ಸ್ವಲಾತ್ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ನೆರವೇರಿಸಿ ದೇಶದ ವಿವಿಧ ಭಾಗಗಳಿಂದ ಧಾರ್ಮಿಕ ಪಂಡಿತರನ್ನು ಉಲಮಾ ನೇತಾರರನ್ನು ತಮ್ಮೂರಿಗೆ ಕರೆಸಿ ಊರಿನ ಜನತೆಗೆ ಹಾಗೂ ಯುವ ಸಮುದಾಯ ದಾರಿ ತಪ್ಪದಂತೆ ಜಾಗೃತಿ ವಹಿಸಲು ಧಾರ್ಮಿಕ ಚಿಂತನೆಯನ್ನು ನೀಡುವ ಮೂಲಕ ಹಾಗೂ ಜಾಗೃತಿಯನ್ನು ಮೂಡಿಸುವ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಇವೆಲ್ಲದಕ್ಕೂ ಸಹಕಾರ ನೀಡುವ ಪೈಚಾರ್,ಸುಳ್ಯ, ತಾಲೂಕಿನ,ಜಿಲ್ಲೆಯ, ವಿಶೇಷವಾಗಿ ವಿದೇಶದಲ್ಲಿರುವ ಊರಿನ ಯುವಕರ ತಂಡವು ಸಂಘಟನೆಯ ಯಶಸ್ವಿಗೆ ಸಂಪೂರ್ಣ ಕೈ ಜೋಡಿಸುತ್ತಾ ಬರುತ್ತಿದ್ದು ಅಲ್ ಅಮೀನ್ ಯೂತ್ ಸೆಂಟರ್ ನ ಪ್ರೋತ್ಸಾಹಕರಾಗಿ ಮತ್ತು ಮಾರ್ಗದರ್ಶಕರಾಗಿರುತ್ತಾರೆ ಎಂಬುವುದೇ ಹೆಮ್ಮೆಯ ಸಂಗತಿಯಾಗಿದೆ.
ಇದೀಗ 18 ವರ್ಷಗಳ ಬಳಿಕ ತಮ್ಮದೇ ಆದ ನೂತನ ಕಚೇರಿಯನ್ನು ನಿರ್ಮಿಸುವ ಮೂಲಕ ಅದರ ಉದ್ಘಾಟನೆಯ ಸಮಾರಂಭ ದಂದು ಪ್ರಪ್ರಥಮವಾಗಿ ರಾಜ್ಯಮಟ್ಟದ ದಫ್ ಸ್ಪರ್ಧೆಯನ್ನು ಹಮ್ಮಿಕೊಳ್ಳುವ ಮೂಲಕ ಇಸ್ಲಾಮಿನ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ.
ಮುಂದಿನ ದಿನಗಳಲ್ಲಿಯೂ ಅತ್ಯುತ್ತಮವಾದ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ನೂರಾರು ಸಾಮಾಜಿಕ ಕಾರ್ಯಗಳು ಸಂಸ್ಥೆಯ ವತಿಯಿಂದ ನಡೆಯಲಿ,ನೂರಾರು ಬಡ ಕುಟುಂಬಗಳಿಗೆ ಕಷ್ಟದ ಸಂಧರ್ಭ ಅವರ ಕಣ್ಣೀರು ಒರೆಸಿ ಆಸರೆಯಾಗುವ ಇಂತಹ ಸಂಸ್ಥೆಗಳಿಗೆ ಧಾನಿಗಳ ನಿರಂತರ ಪ್ರೋತ್ಸಾಹವಿರಲಿ ಎಂಬ ಮಾತಿನೊಂದಿಗೆ…..
ಹಸೈನಾರ್ ಜಯನಗರ ✍️