ಹಾಸನ : ಈ ಡಿ.ಕೆ ಶಿವಕುಮಾರ್ ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ಬಂಡೆಯಂತೆ ನಿಲ್ಲುವುದಾಗಿ ಮೈಸೂರಿನಲ್ಲಿ ಹೇಳಿದ್ದೇನೆ. ಈಗಲೂ ಇದ್ದೇನೆ, ನಾಳೆಯೂ ಇರುತ್ತೇನೆ. ಸಾಯುವವರೆಗೂ ಇರುತ್ತೇನೆ. ಇದು ಈ ಕನಕಪುರದ ಬಂಡೆಯ ಇತಿಹಾಸ. ನಾನು ಎಲ್ಲಿ ಕೆಲಸ ಮಾಡುತ್ತೇನೋ ಅಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವುದು ನನ್ನ ಕರ್ತವ್ಯ ಎಂದು ಡಿಸಿಎಂ ಡಿ.ಕೆ.
ಶಿವಕುಮಾರ್ ತಿಳಿಸಿದರು.
ಹಾಸನದಲ್ಲಿ ನಡೆದ ಜನಕಲ್ಯಾಣ ಸಮಾವೇಶದಲ್ಲಿ ಶಿವಕುಮಾರ್ ಅವರು ಮಾತನಾಡಿ, ಮೊದಲು ಹಾಸನಾಂಬೆ ತಾಯಿಯ ಪಾದಗಳಿಗೆ ಸಾಷ್ಟಾಂಗ ನಮನಗಳು. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳು ಅದಿಕಾರಕ್ಕೆ ಬಂದಂತೆ. 25 ವರ್ಷಗಳ ನಂತರ ಹಾಸನದ ಮಹಾಜನತೆ ಕಾಂಗ್ರೆಸಿಗನನ್ನು ಆರಿಸಿ ಸಂಸತ್ತಿಗೆ ಕಳಿಸಿದ್ದೀರಿ. ಈ ಭಾಗದ ಧ್ವನಿಯಾಗಲು, ನೊಂದ ತಾಯಂದಿರಿಗೆ ರಕ್ಷಣೆ ನೀಡಲು ಶ್ರೇಯಸ್ ಪಟೇಲ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ನಿಮಗೆ ನಮನಗಳು.
ಸರ್ಕಾರದ ಶಕ್ತಿ ನೂರೆಂಟು, ಐದು ಗ್ಯಾರಂಟಿಗಳು ಪರ್ಮನೆಂಟು, 2028ರಲ್ಲಿ ನಾವೇ ಅಧಿಕಾರಕ್ಕೆ ಬರುವುದು ಹಂಡ್ರೆಡ್ ಪೆರ್ಸೆಂಟ್. ಇದನ್ನು ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಸುಳ್ಳಿನ ಸರಮಾಲೆಗಳಿಗೆ ಸಂಡೂರು, ಶಿಗ್ಗಾವಿ, ಚನ್ನಪಟ್ಟಣದಲ್ಲಿ ಜನ ಉತ್ತರ ನೀಡಿದ್ದಾರೆ.
ಕಮಲ ಕೆರೆಯಲ್ಲಿದ್ದರೆ ಚೆಂದ, ತೆಲೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದ ಕಾರಣ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಜನರಿಗೆ ಆರ್ಥಿಕ ಶಕ್ತಿ ತುಂಬಲಾಗಿದೆ.
ರಾಮನಗರದಲ್ಲಿ ನಾಲ್ಕಕ್ಕೆ ನಾಲ್ಕು, ಮಂಡ್ಯದಲ್ಲಿ ಆರು, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರಿನಲ್ಲಿ ನಾವು ಹೆಚ್ಚು ಕ್ಷೇತ್ರ ಗೆದ್ದಿದ್ದು, ಮುಂದೆ ಹಾಸನದಲ್ಲೂ ಹೆಚ್ಚು ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೀವಿ ಎಂಬ ಆತ್ಮವಿಶ್ವಾಸವಿದೆ. ಇದಕ್ಕೆ ನೀವು ಸಹಕಾರ ನೀಡಬೇಕು ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಹಾಸನದ ಇತಿಹಾಸ ನೋಡಿದರೆ ನೋವಾಗುತ್ತದೆ. ಅನೇಕ ರಾಜಕಾರಣಿಗಳು, ಕುಟುಂಬಗಳ ಕಣ್ಣಲ್ಲಿ ನೀರು ತರಿಸಿದ್ದಾರೆ. ಹಾಸನಾಂಬೆ ತಾಯಿ ಆ ಕಣ್ಣೀರು ಒರೆಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ತಾಯಂದಿರ ಸ್ವಾಭಿಮಾನ ಕಾಪಾಡಲು ನಾವು ಈ ಸಮಾವೇಶ ಹಮ್ಮಿಕೊಂಡಿದ್ದೇವೆ. ಇದು ಹಾಸನದ ದೊಡ್ಡ ಇತಿಹಾಸ.
ಗೌಡರ ತವರಲ್ಲಿ ಈ ಸಮಾವೇಶ ಎಂದು ಮಾಧ್ಯಮಗಳು ಬರೆದಿವೆ. ನಿಜ, ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ದೇವೇಗೌಡರು ದೇಶದ ಪ್ರಧಾನಮಂತ್ರಿಯಾದರು. ಬಿಜೆಪಿಯವರ ಬೆಂಬಲದೊಂದಿಗೆ ಕುಮಾರಸ್ವಾಮಿ 20 ತಿಂಗಳು ಸಿಎಂ ಆದರು. ಮತ್ತೆ ಕಾಂಗ್ರೆಸ್ ಬೆಂಬಲದೊಂದಿಗೆ 14 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಈ ಉಪಚುನಾವಣೆಯಲ್ಲಿ ನಾವು ಜನರ ಮುಂದೆ ನಾವು ಕೆಲವು ಪ್ರಶ್ನೆಗಳನ್ನು ಇಟ್ಟೆವು.
ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಉಳುವವನಿಗೆ ಭೂಮಿ, 20 ಅಂಶಗಳ ಕಾರ್ಯಕ್ರಮ, ಅಂಗನವಾಡಿ, ಪಿಂಚಣಿ ಯೋಜನೆ, ತಂತ್ರಜ್ಞಾನ ಕ್ರಾಂತಿ, ಅನ್ನಭಾಗ್ಯ, ಆಹಾರ ಭದ್ರತಾ ಕಾಯ್ದೆ, ಶೈಕ್ಷಣಿಕ ಹಕ್ಕು, ಉದ್ಯೋಗ ಖಾತ್ರಿ, ಕ್ಷೀರ ಭಾಗ್ಯ, ಕೃಷಿ ಭಾಗ್ಯ, ಸ್ತ್ರೀಶಕ್ತಿ ಸಂಘ, ಬಿಸಿಯೂಟ, ಐಟಿ ಬಿಟಿ ಕ್ಷೇತ್ರಕ್ಕೆ ಆದ್ಯತೆ ನೀಡಲಾಯಿತು. ಈಗ ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ.
ಚುನಾವಣೆ ಸಮಯದಲ್ಲಿ ಚನ್ನಪಟ್ಟಣಕ್ಕೆ ಬಂದು ಕಣ್ಣೀರು ಹಾಕುವ ಕುಮಾರಸ್ವಾಮಿ ಅವರೇ ನಿಮ್ಮ ಸಾಕ್ಷಿ ಗುಡ್ಡೆ ಏನು? ಹಾಸನದಲ್ಲಿ ದೇವೇಗೌಡರ ಕುಟುಂಬದ ಸಾಕ್ಷಿ ಗುಡ್ಡೆ ಏನು? ನಾನು ನಿಮ್ಮ ಕುಟುಂಬದ ಮಾಜಿ ಸಂಸದರ ಸಾಕ್ಷಿ ಗುಡ್ಡೆ ಬಗ್ಗೆ ಮಾತನಾಡುವುದಿಲ್ಲ. ಅದರ ಬಗ್ಗೆ ಮಾತನಾಡಲು ನನಗೆ ಅಸಹ್ಯವಾಗುತ್ತದೆ. ನಾವು ಬದುಕಿನ ಮೇಲೆ ರಾಜಕೀಯ ಮಾಡುತ್ತೇವೆ. ಭಾವನೆ, ಧರ್ಮಗಳ ಮೇಲೆ ರಾಜಕೀಯ ಮಾಡುವುದಿಲ್ಲ. ನಮ್ಮ ಅಧಿಕಾರ ನಶ್ವರ. ಆದರೆ ಕಾಂಗ್ರೆಸ್ ಪಕ್ಷದ ಸಾಧನೆ ಅಜರಾಮರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಈಶ್ವರ. ಇದು ಜನರ ಕಲ್ಯಾಣ ಹಾಗೂ ಗ್ಯಾರಂಟಿ ಗೆಲುವಿನ ಸಮಾವೇಶ ಎಂದು ಹೇಳಿದರು.