ಅಂಬಾಜೋಗೈ (ಮಹಾರಾಷ್ಟ್ರ): ತಾಯಿಯ ಪ್ರೀತಿಗೆ ಗಡಿಗಳಿಲ್ಲ, ಆಕೆಯ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಎಂಬುದಕ್ಕೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗೈನಲ್ಲಿ ನಡೆದ ಈ ಹೃದಯಸ್ಪರ್ಶಿ ಘಟನೆಯೇ ಸಾಕ್ಷಿ. ತನ್ನ ಮಗಳ ಶಾಲಾ ಶುಲ್ಕವನ್ನು (School Fees) ಪಾವತಿಸಲು ಹಣವಿಲ್ಲದೆ ಕಂಗಾಲಾಗಿದ್ದ 47 ವರ್ಷದ ರಮಾಬಾಯಿ ರಣವೀರ್ ಎಂಬ ಬಡ ತಾಯಿ, 3,000 ರೂಪಾಯಿ ಬಹುಮಾನಕ್ಕಾಗಿ ಸೀರೆ ಉಟ್ಟು ಬರಿಗಾಲಿನಲ್ಲಿ ಓಡಿ ಮ್ಯಾರಥಾನ್‌ನಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದ್ದಾರೆ.
ಬೀಡ್ ಜಿಲ್ಲೆಯ ಅಂಬಾಜೋಗೈನ ಭಾರತಿಯ ಶಿಕ್ಷಣ ಪ್ರಸಾರಕ ಸಂಸ್ಥೆಯ ಖೋಲೇಶ್ವರ ಶಿಕ್ಷಣ ಸಂಕೀರ್ಣವು ಆಯೋಜಿಸಿದ್ದ ‘ಅಮೃತ ದೌಡ್’ ಮ್ಯಾರಥಾನ್ ಸ್ಪರ್ಧೆಯ ಆರಂಭಿಕ ಗೆರೆಯಲ್ಲಿ ಉಳಿದ ಸ್ಪರ್ಧಿಗಳು ಸ್ಪೋರ್ಟ್ಸ್ ಶೂ ಮತ್ತು ರನ್ನಿಂಗ್ ಸೂಟ್ ಧರಿಸಿ ಸಿದ್ಧರಾಗಿದ್ದರು. ಆದರೆ ರಮಾಬಾಯಿ ಅವರ ಬಳಿ ಉತ್ತಮ ಶೂ ಇರಲಿಲ್ಲ, ಓಡಲು ಸೂಕ್ತ ಉಡುಪೂ ಇರಲಿಲ್ಲ. ಧರಿಸಿದ್ದ ಚಪ್ಪಲಿ ಜಾರುತ್ತಿದ್ದಂತೆ, ಅದನ್ನು ಕೈಯಲ್ಲೇ ಹಿಡಿದುಕೊಂಡು, ಸಾಮಾನ್ಯ ಸೀರೆಯಲ್ಲೇ ಬರಿಗಾಲಿನಲ್ಲಿ ರಸ್ತೆಯ ಮೇಲೆ ಓಡಲು ಪ್ರಾರಂಭಿಸಿದರು.
ಕಾಲಿಗೆ ಚುಚ್ಚುವ ಕಲ್ಲು-ಮಣ್ಣು, ಉರಿಯುವ ಹಾದಿ ಯಾವುದೂ ಆಕೆಗೆ ಸವಾಲಾಗಿ ಕಾಣಿಸಲಿಲ್ಲ. ಆಕೆಯ ಕಣ್ಣಮುಂದೆ ಇದ್ದದ್ದು ಕೇವಲ ಒಂದೇ ಗುರಿ; ಸ್ಪರ್ಧೆಯಲ್ಲಿ ಗೆದ್ದು ಸಿಗುವ 3,000 ರೂಪಾಯಿ ನಗದು ಬಹುಮಾನದಿಂದ ಮಗಳ ಶಾಲಾ ಫೀಸ್ ಅನ್ನು ಪಾವತಿಸುವುದು.
ಅಂತಿಮವಾಗಿ ತನ್ನ ಛಲದ ಓಟದಿಂದ ಪ್ರಥಮ ಸ್ಥಾನ ಗಳಿಸಿ ವಿಜೇತರಾದ ರಮಾಬಾಯಿ ಅವರಿಗೆ 3,000 ರೂಪಾಯಿ ಬಹುಮಾನ ವಿತರಿಸಲಾಯಿತು. ಗಂಡನನ್ನು ಕಳೆದುಕೊಂಡು, ಅಡುಗೆ ಕೆಲಸ ಮಾಡುತ್ತಾ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಮಕ್ಕಳನ್ನು ಓದಿಸುತ್ತಿರುವ ಈ ತಾಯಿಯ ಛಲ ಮತ್ತು ತಾಯ್ತನದ ಮಮಕಾರಕ್ಕೆ ಈಗ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.
