ನಡುಕ ಹುಟ್ಟಿಸುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಬೈಕ್ ಸವಾರರಿಬ್ಬರನ್ನು ಟ್ರಕ್ ಒಂದೂವರೆ ಕಿ.ಮೀ ಎಳೆದೊಯ್ದಿರುವ ಘಟನೆ ಇದಾಗಿದೆ. ಬೈಕ್ ಸವಾರರು ಅರಚುತ್ತಲೇ ಇದ್ದರೂ ಅದಕ್ಕೆ ಬೆಲೆ ಕೊಡದೆ ಧರ ಧರನೆ ಎಳದೊಯ್ದಿದ್ದಾನೆ. ಟ್ರಕ್ ಚಾಲಕನನ್ನು ತಡೆಯಲು ಕೆಲವು ಪಾದಚಾರಿಗಳು ಸಹ ಟ್ರಕ್ ಚಾಲಕನ ಹಿಂದೆ ಓಡಿದರು, ಆದರೆ ಟ್ರಕ್ ಚಾಲಕ ನಿಲ್ಲಿಸಲೇ ಇಲ್ಲ.
ರಾಮ್‌ಬಾಗ್ ಇಂಟರ್‌ಸೆಕ್ಷನ್‌ನಿಂದ ವಾಟರ್‌ವರ್ಕ್ಸ್‌ವರೆಗೆ ಸುಮಾರು 1.5 ಕಿ.ಮೀ ವರೆಗೆ ಟ್ರಕ್‌ನಲ್ಲಿ ಇಬ್ಬರನ್ನೂ ಎಳೆದೊಯ್ದಿದ್ದಾನೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಪ್ರಕಾಶ್ ನಗರದ ನಿವಾಸಿ ಜಾಕೀರ್ ಎಂಬಾತ ತನ್ನ ಸ್ನೇಹಿತನೊಂದಿಗೆ ವಿದ್ಯುತ್ ಸ್ಥಾವರದಿಂದ ರಾಂಬಾಗ್‌ನಲ್ಲಿರುವ ತನ್ನ ಮನೆಗೆ ಬರುತ್ತಿದ್ದ.
ರಾಮ್‌ಬಾಗ್ ಛೇದಕದಲ್ಲಿ ತನ್ನ ಬೈಕ್‌ನಲ್ಲಿ ಯು-ಟರ್ನ್ ತೆಗೆದುಕೊಂಡಿದ್ದಾರೆ ಆಗ ಅಲ್ಲೇ ಇದ್ದ ಟ್ರಕ್ ಚಲಿಸಲು ಆರಂಭಿಸಿತ್ತು. ಬೈಕ್ ಲಾರಿಯ ಮುಂಭಾಗದಲ್ಲಿ ಸಿಲುಕಿಕೊಂಡಿತ್ತು, ಅದರ ವೇಗ ತುಂಬಾ ಹೆಚ್ಚಿತ್ತು, ಬೈಕ್ನಿಂದ ಬೆಂಕಿಯ ಕಿಡಿಗಳೇಳುತ್ತಿದ್ದವು.
ಒಂದು ಸಿಗ್ನಲ್ ಬಳಿ ಬಂದು ನಿಂತಾಗ ಸ್ಥಳೀಯರು ಅವರಿಬ್ಬರನ್ನು ರಕ್ಷಿಸಿ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆರೋಗ್ಯ ಸ್ಥಿರವಾಗಿದೆ ಆದರೆ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.