ಶಾಲೆಗಾಗಿ ಮಿಡಿಯಲಿ ನಮ್ಮ ಹೃದಯ ಎಂಬ ದ್ವೇಯದಡಿ ಶಿಕ್ಷಣ ಮಟ್ಟ ಹೆಚ್ಚಿಸುವ ಪಣ

ಸ್ಥಳೀಯರ ಆಶೆ ಈಡೇರಿಕೆಗೆ ಮಿಡಿಯ ಬೇಕಾಗಿದೆ ಜನಪ್ರತಿನಿದಿನಗಳ ಮತ್ತು ದಾನಿಗಳ ಮನ

ಬಂಟ್ವಾಳ ತಾಲೂಕಿನ ವಿಟ್ಲದ ಬಾರೆಬೆಟ್ಟು ಬಳಿ ಕೊಲ್ನಾಡು ಗ್ರಾಮದ ಮಾದಕಟ್ಟೆ ಎಂಬ ಪುಟ್ಟ ಪ್ರದೇಶ.

ಈ ಗ್ರಾಮದಲ್ಲಿ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣ ಕಾಶಿ, ಗುರುಕುಲ ಎಂದೇ ಕಳೆದ 90 ದಶಕಗಳಿಂದ ಪ್ರಸಿದ್ದಿಯಾಗಿರುವ ಪುಟ್ಟ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯೊಂದು ಇಲ್ಲಿ ನೆಲೆ ನಿಂತಿದೆ.

ಈ ಸಂಸ್ಥೆಯು 1933ನೇ ಇಸವಿಯಲ್ಲಿ ಸ್ಥಳೀಯ ನಿವಾಸಿ ಹಿರಿಯರಾದ ದಿವಂಗತ ಕೃಷ್ಣಭಟ್ ಹಾಗೂ ನಾರಾಯಣ ಭಟ್ ರವರಿಂದ ಸ್ಥಾಪಿಸಲ್ಪಟ್ಟ ಶಾಲೆ ಊರಿನ ವಿಧ್ಯಾ ದೇಗುಲವಾಗಿ ಸ್ಥಳೀಯರ ಸಹಕಾರದೊಂದಿಗೆ ಅಂದು ಪ್ರಾರಂಭವಾಯಿತು.ಅಂದು ಕೇವಲ 12 ಮಂದಿ ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಈ ಶಾಲೆ 1979-80 ರಲ್ಲಿ ಪೂರ್ಣ ಪ್ರಮಾಣವಾಗಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಪರಿವರ್ತನೆ ಗೊಂಡಿತು.
1983 ರಲ್ಲಿ ಸ್ವರ್ಣ 1993 ರಲ್ಲಿ ವಜ್ರ ಮಹೋತ್ಸವ ನಡೆಸಿರುವ ಈ ಸಂಸ್ಥೆಯು ಸಾವಿರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ.
ಈ ಶಾಲೆಯಲ್ಲಿ ಕಲಿತ ನೂರಾರು ಹಳೆ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಉನ್ನತ ಮಟ್ಟದ ಹುದ್ದೆಯಲ್ಲಿ ಇದ್ದು ಅವರ ಪ್ರೋತ್ಸಾಹ ಸದಾ ಸಂಸ್ಥೆಗೆ ಲಭ್ಯವಾಗಿದೆ.

ಆದರೆ ಪ್ರಸ್ತುತ ಸಂಧರ್ಭದಲ್ಲಿ ಶಾಲೆಯ ಮೂಲಭೂತ ವ್ಯವಸ್ಥೆಗಳ ಪರಿಸ್ಥಿತಿ ಅತಿಯಾಗಿ ಕ್ಷೀಣಿಸಿದ್ದು ಶಾಲೆಯ ಮಾಡಿನ ಪಕ್ಕಾಸಿನಿಂದ ಹಿಡಿದು ಕಿಟಕಿ ಬಾಗಿಲವರೆಗೂ ಇಂದೋ ನಾಳೆಯೋ ಬೀಳುವ ಸ್ಥಿತಿಗೆ ಬಂದು ನಿಂತಿದೆ.
ಇತ್ತೀಚಿನ ದಿನಗಳಲ್ಲಿ ಬಾನೆತ್ತರದ ಖಾಸಗಿ ಶಾಲೆಗಳು ನಾ ಮುಂದು ತಾ ಮುಂದು ಎಂದು ತನ್ನ ಭರಾಟೆಯನ್ನು ಪ್ರದರ್ಶಿಸುವ ಈ ಸಮಯದಲ್ಲಿ ಈ ಭಾಗದ 3,4 ಗ್ರಾಮದಲ್ಲಿ ಆರ್ಥಿಕ ಸ್ಥಿತಿ ಕುಂದಿರುವ ಬಡ ಕುಟುಂಬದ ಮಕ್ಕಳು ಶಿಕ್ಷಣ ವಂಚಿತರಾಗಬಾರದು ಎಂದು ಶಾಲೆಯ ಉಳಿವಿಗಾಗಿ ಊರಿನ ಸಮಸ್ತ ಭಾಂದವರು ಇಂದು ಒಗ್ಗಟ್ಟಾಗಿ ಪ್ರಯತ್ನಿಸುತ್ತಿದ್ದಾರೆ. ದಾನಿಗಳ ಮತ್ತು ಜನಪ್ರತಿನಿದಿಗಳ ಸಹಾಯ ಹಸ್ತಕ್ಕಾಗಿ ಕಾದು ನೋವಿನ ದಿನಗಳನ್ನು ಪ್ರಸ್ತುತ ಕಳೆಯುತ್ತಿದ್ದಾರೆ.

ಕಳೆದ 90 ದಶಕಗಳಿಂದ ಹಲವಾರು ಏಳು ಬೀಳುಗಳನ್ನು ಇದುವರೆಗೆ ಕಂಡಿದ್ದರೂ ಸ್ಥಳೀಯರ ಶ್ರಮ,ಪ್ರೋತ್ಸಾಹ ಮತ್ತು ಸಹಕಾರದಿಂದ ಇದನ್ನು ಇಂದಿಗೂ ಕೂಡ ಉಳಿಸಲು ಸಾಧ್ಯವಾಗಿದೆ ಎಂಬುವುದು ಮಾತ್ರ ಕಟು ಸತ್ಯವೂ ಕೂಡ ಆಗಿದೆ.

ಇದೀಗ ಸ್ಥಳೀಯರೀಗೆ ನಮ್ಮೂರಿನ ಶಾಲೆಗೆ 91 ವರ್ಷಗಳನ್ನು ಪೂರೈಸಿದೆ ಎಂಬ ಸಂತಷ ಒಂದೆಡೆಯಾದರೆ ಮತ್ತೊಂದೆಡೆ ನಮ್ಮೂರ ಶಾಲೆ ಅಳಿವಿನಂಚಿಗೆ ಬಂದು ನಿಂತಿದೆ ಎಂಬ ನೋವು ಕೂಡ ಆವರಿಸಿದೆ.ಕಾರಣ ಶಾಲೆ ಅನುದಾನಿತವಾದ ಕಾರಣ.ಇದು ಸರಕಾರಿ ಯಾಗಿದ್ದರೆ ಜನಪ್ರತಿನಿದಿನಗಳ ಸಹಕಾರ ಪಡೆದು ಸರಕಾರದ ಸಹಾಯ ಪಡೆಯ ಬಹುದಿತ್ತು, ಆದರೆ ಸ್ಥಳೀಯ ದಾನಿಗಳ ಸ್ಥಳ ದಾನದಿಂದ ಮಾಡಿರುವ ಸಂಸ್ಥೆಯಾದ ಹಿನ್ನಲೆಯಲ್ಲಿ ಏನೂ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಪ್ರಸ್ತುತ ಪರಿಸ್ಥಿತಿ ಬಂದು ನಿಲ್ಲಲು ಕಾರಣವಾಗಿದೆ.

ಆದರೆ ಛಲವನ್ನು ಬಿಡದ ಸ್ಥಳೀಯ ಯುವಕರು ಮತ್ತು ಹಳೆ ವಿದ್ಯಾರ್ಥಿಗಳು ಇದೀಗ ಒಟ್ಟಾಗಿ ನಿಂತಿದ್ದು 91 ವರ್ಷದ ನಮ್ಮೂರಿನ ಶಾಲೆಯನ್ನು ಕಮರಿಹೋಗಲು ಬಿಡದೆ ಶಾಲಾ ಕಟ್ಟಡಕ್ಕೆ ಆಧುನಿಕ ಶೈಲಿಯನ್ನು ನೀಡಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಜೊತೆಗೆ ಪುಟ್ಟ ಮಂದಿರವಾಗಿ ನಿರ್ಮಾಣವಾಗಿದ್ದ ಈ ಸಂಸ್ಥೆಯನ್ನು ಮುಂದೆ ಭವ್ಯ ಮಂದಿರವಾಗಿ ಮಾಡುವ ದೃಡ ನಿರ್ಧಾರವನ್ನು ಮಾಡಿಕ್ಕೊಂಡು ವಿಶ್ವಾಸಭರಿತರಾಗಿ ನಿಂತಿದ್ದಾರೆ.
ಈ ಗುರಿಯ ಫಲವೇ ಎಂಬತೆ ಕೆಲವು ದಿನಗಳ ಹಿಂದೆ ಈ ಭಾಗದ ಯುವಕರ ತಂಡವು ಶಾಲಾಭಿವೃಧಿ ಸಮಿತಿಯ ಆಶ್ರಯದಲ್ಲಿ ವಿಜೃಂಭಣೆಯ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡುವ ಮೂಲಕ ನೂರಾರು ಹಿರಿಯ ವಿದ್ಯಾರ್ಥಿಗಳನ್ನು, ಜನ ನಾಯಕರುಗಳನ್ನು ಹಾಗೂ ಹತ್ತು ಹಲವಾರು ದಾನಿಗಳನ್ನು ಒಂದೇ ಸೂರಿನಡಿಗೆ ತಂದು ಉಪಸ್ಥಿತಪಡಿಸುವಲ್ಲಿ ಯಶಸ್ವಿಗಿ,ಈ ಕಾರ್ಯಕ್ರಮದ ಮೂಲಕ ಶಾಲೆಯ ಅಭಿವೃದ್ಧಿಯ ಬಗ್ಗೆ ಕಹಳೆ ಮೊಳಗಿಸುವ ಮೂಲಕ ಒಂದು ಉತ್ತಮ ಕಾರ್ಯಕ್ಕೆ ಮುಂದಾಗಿದ್ದು ವಿಶೇಷವೆನಿಸಿದೆ.

ಈ ಒಂದು ಶಾಲಾ ಕಟ್ಟಡ ಅವಶೇಷಗಳ ಸಾಲಿಗೆ ಸೇರದಂತೆ ತಡೆಯಲು ಈ ಭಾಗದ ಹಲವಾರು ಹಿರಿಯ ಜೀವಗಳು ಮತ್ತು ಯುವಸಮುದಾಯಗಳು ಸತ ಪ್ರಯತ್ನದಲ್ಲಿದ್ದು ವಿಶೇಷವಾಗಿ ಪ್ರಸ್ತುತ ಶಾಲಾ ಮುಖ್ಯ ಶಿಕ್ಷಕ ಹರೀಶ್ ಕುಮಾರ್,ಹಿರಿಯರಾದ ಇಬ್ರಾಹಿಂ ಕೆ ಬಿ, ಶ್ರೀಕಾಂತ ಪಡಾರು, ಗೋಪಾಲ ಕೃಷ್ಣ ಭಟ್,ವಿಷ್ಣು ಕೃಪಾ ಮಾದಕಟ್ಟೆ,ಎಸ್ ಎನ್ ಮೊಗಸಾಲೆ,ನಾರಾಯಣ ಶೆಟ್ಟಿ ಕುಲ್ಯಾರು,ಯೂಸುಫ್ ತಾಳಿತ್ತನೂಜಿ,ನಿವೃತ್ತ ಮುಖ್ಯ ಗುರುಗಳಾದ ಎಂ ಈಶ್ವರ ಭಟ್,ಬಿ ಬಾಲಕೃಷ್ಣ ಅಡ್ಯಂತ್ತಾಯ, ರಾಜೇಶ್ ತೋಡ್ಲ, ನಝಿರ್ ಮದಕ, ಮಹಮ್ಮದ್ ಕಲ್ಲಮಜಲು,ಉಮೇಶ ಮುಂಡತ್ತಜೆ ಇವರುಗಳು ಪರಿಶ್ರಮ ನಡೆಯುತ್ತಿದೆ.

ಅಲ್ಲದೆ ಈ ಶಾಲೆಯಲ್ಲಿ ಕಲಿತು ಸ್ವಂತ ಉದ್ದಿಮೆ ಪ್ರಾರಂಭಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿರುವ ದಾನಿಗಳು ಹಮೀದ್ ಕುಲ್ಯಾರ್,ಹೈ ಕೋರ್ಟ್ ವಕೀಲರಾದ ಅರುಣ್ ಶ್ಯಾಮ್ ಸೇರಿದಂತೆ,ಮಾಧ್ಯಮ ಕ್ಷೇತ್ರ, ಕೃಷಿ ಕ್ಷೇತ್ರ, ರಾಜಕೀಯ, ಸಾಮಾಜಿಕ ಈಗೆ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕ್ಕೊಂಡ ಹಿರಿಯ ವಿದ್ಯಾರ್ಥಿ ಸಾಧಕರುಗಳ ಪ್ರೋತ್ಸಾಹ ಮತ್ತು ಸಹಾಯ ಸಹಕಾರ ಲಭಿಸುವ ಭರವಸೆ ಇದೆ ಎಂದು ಸಂಘಟಕರ ವಿಶ್ವಾಸ ವಾಗಿದೆ.

ಒಟ್ಟಾರೆಯಾಗಿ ಸ್ಥಳೀಯ ಯುವಕರ ಮನಸ್ಸಿನಲ್ಲಿ ರುವ ‘ಶಾಲೆಗಾಗಿ ಮಿಡಿಯಲಿ ನಮ್ಮ ಹೃದಯ ಎಂಬ ದ್ವೇಯ ಘೋಷಣೆ’ ಯಶಸ್ವಿಯಾಗಲು ಸರಕಾರ ಮತ್ತು ಜನಪ್ರತಿನಿಧಿಗಳು ಮುಂದಾಗಬೇಕಾಗಿದೆ.
ಪುಟ್ಟ ಗ್ರಾಮದ ಪುಟ್ಟ ವಿದ್ಯಾಮಂದಿರ ಸುಂದರ ಸದೃಢವಾಗಿ ಬೆಳೆದು ನೂರಾರು ಮಕ್ಕಳ ಭವಿಷ್ಯ ರೂಪಿಸುವ ಮೂಲಕ ಈ ಶಿಕ್ಷಣ ಸಂಸ್ಥೆ ಬೆಳೆಯಲಿ ಎಂಬುವುದೇ ನಮ್ಮ ಆಶಯವಾಗಿದೆ.


ಹಸೈನಾರ್ ಜಯನಗರ✍️

Leave a Reply

Your email address will not be published. Required fields are marked *