
ಕಲ್ಲಿಕೋಟೆ: ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಚಿವ ಹಾಗೂ ಮದ್ರಾಸ್ ಪ್ರೆಸಿಡೆನ್ಸಿಯ ಶಾಸಕರಾಗಿದ್ದ ಪಿ.ಪಿ. ಉಮ್ಮರ್‌ಕೋಯ ಅವರ 26ನೇ ಸಂಸ್ಮರಣಾ ಕಾರ್ಯಕ್ರಮವು ಸೆಪ್ಟೆಂಬರ್ 05ರಂದು ಕೋಝಿಕ್ಕೋಡ್‌ನ ನಳಂದಾ ಆಡಿಟೋರಿಯಂನಲ್ಲಿ ನಡೆಯಿತು. ಪಿ.ಪಿ. ಉಮ್ಮರ್‌ಕೋಯ ಫೌಂಡೇಶನ್ ಅಧ್ಯಕ್ಷರಾದ ಡಾ. ಕೆ. ಮೊಯ್ದು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಅಝೀಝ್ ಸ್ವಾಗತ ಭಾಷಣ ಮಾಡಿದರು.
ಈ ಶುಭ ಸಮಾರಂಭದಲ್ಲಿ ಮಾಜಿ ಕೇಂದ್ರ ಸಚಿವರು, ಕೃಷಿ ಇಲಾಖೆ ಮಾಜಿ ಸಚಿವರು ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷರಾದ ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರಿಗೆ ‘ಪಿ.ಪಿ. ಉಮ್ಮರ್‌ಕೋಯ ಸ್ಮಾರಕ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕೇರಳ ರಾಜ್ಯದ ಗೃಹ ಹಾಗೂ ವಿಜಿಲೆನ್ಸ್ ಸಚಿವ ರಮೇಶ್ ಚೆನ್ನಿತ್ತಲ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಉಮ್ಮರ್‌ಕೋಯ ಮತ್ತು ಮುಲ್ಲಪ್ಪಳ್ಳಿ ಅವರ ಸೇವೆಯನ್ನು ಕೊಂಡಾಡಿ ಮಾತನಾಡಿದ ರಮೇಶ್ ಚೆನ್ನಿತ್ತಲ ಅವರು, “ಪಿ.ಪಿ. ಉಮ್ಮರ್‌ಕೋಯ ಅವರು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಶಾಸಕರಾಗಿ, ಶಿಕ್ಷಣ ಹಾಗೂ PWD ಸಚಿವರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಶ್ರೇಷ್ಠ ಗಾಂಧಿವಾದಿ, ಸತ್ಯಸಂಧ ಹಾಗೂ ನಿಷ್ಕಳಂಕ ನಾಯಕರಾಗಿದ್ದರು. ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದ ಅವರು, ಗಾಂಧೀಜಿಯವರ ತತ್ವ ಮತ್ತು ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ವಜನಿಕ ಸೇವೆಯಲ್ಲಿ ಶ್ರೇಷ್ಠ ಕೊಡುಗೆ ನೀಡಿದ್ದರು” ಎಂದು ಸ್ಮರಿಸಿದರು.
ಮುಂದುವರಿದು ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರ ಸರಳತೆಯನ್ನು ಶ್ಲಾಘಿಸಿದ ಚೆನ್ನಿತ್ತಲ ಅವರು, “ಕೇಂದ್ರ ಗೃಹ ಸಚಿವರಾಗಿದ್ದಾಗ ಅವರಿಗೆ ಎರಡು ವಿಶೇಷ ವಿಮಾನಗಳ (Private Jets) ಸೌಲಭ್ಯ ಲಭ್ಯವಿದ್ದರೂ, ಅದನ್ನು ಎಂದಿಗೂ ದುರುಪಯೋಗಪಡಿಸಿಕೊಳ್ಳದೆ ಸಾಮಾನ್ಯ ವಿಮಾನದಲ್ಲೇ ಕೇರಳ ಹಾಗೂ ಕ್ಯಾಲಿಕಟ್‌ಗೆ ಪ್ರಯಾಣಿಸುತ್ತಿದ್ದರು. ಉಮ್ಮರ್‌ಕೋಯ ಅವರಂತೆಯೇ ಮುಲ್ಲಪ್ಪಳ್ಳಿ ಅವರೂ ಕೂಡ ಅಧಿಕಾರ ಮೋಹವಿಲ್ಲದ, ಹಸ್ತ ಶುದ್ಧಿ (ಕೈ ಶುದ್ಧಿ) ಹೊಂದಿರುವ ತತ್ವಬದ್ಧ ಗಾಂಧಿವಾದಿ ನಾಯಕರಾಗಿದ್ದಾರೆ” ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ದರ್ಜೆ) ಟಿ.ಎಂ. ಶಹೀದ್ ತೆಕ್ಕಿಲ್ ಅವರು, 1992ರಲ್ಲಿ ಮುಲ್ಲಪ್ಪಳ್ಳಿ ಅವರು ಎ.ಐ.ಸಿ.ಸಿ. ಕರ್ನಾಟಕ ಉಸ್ತುವಾರಿಯಾಗಿದ್ದ ಸಂದರ್ಭ ಹಾಗೂ ಎಸ್. ಬಂಗಾರಪ್ಪ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ತಮಗೊಂದು ಮನವಿ ನೀಡಿದ್ದು, ಅದಕ್ಕೆ ತಕ್ಷಣ ಸ್ಪಂದಿಸಿ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಟ್ಟ ಘಟನೆಯನ್ನು ನೆನಪಿಸಿಕೊಂಡರು. ಪಿ.ಪಿ. ಉಮ್ಮರ್‌ಕೋಯ ನಮ್ಮ ಪಾರಪ್ಪನವರ್ ಕುಟುಂಬದ ಜೊತೆಗೆ ಇರುವ ನಂಟು ಬಹಳ ಹಿಂದಿನದ್ದು, ಹಾಗೇ, ಮುಲ್ಲಪಳ್ಳಿ ತಮ್ಮ ಅಜ್ಜ ಎಂ.ಪಿ. ಮೊಯ್ದು ಹಾಜಿ ಹಾಗೂ ಮಲಬಾರ್ ಭಾಗದ ತಮ್ಮ ಕುಟುಂಬದೊಂದಿಗೆ ಹೊಂದಿದ್ದ ನಿಕಟ ಬಾಂಧವ್ಯವನ್ನು ಸ್ಮರಿಸಿದ ಅವರು, ಪ್ರಸ್ತುತ ಯುವ ನಾಯಕರಿಗೆ ಅವರ ಕಳಂಕರಹಿತ ಮತ್ತು ಸರಳ ರಾಜಕೀಯ ಜೀವನವೇ ಮಾದರಿ ಎಂದರು, ಅಂದು ಪಿಪಿ ಉಮ್ಮರ್ ಕೋಯ ಹೇಗೆ ಗಾಂಧಿವಾದ ಹಾಗೂ ಭ್ರಷ್ಟಮುಕ್ತ ರಾಜಕೀಯ ಮಾಡಿದರೋ ಇಂದು ಹಾಗೇ ಮುಲ್ಲಪಳ್ಳಿಯವರ ನಡೆ ಎಂದು ಕೊಂಡಾಡಿದರು.
ಈ ಸಂದರ್ಭದಲ್ಲಿ ಶಾಸಕ ಜಯಂತ್, ಡಿ.ಸಿ.ಸಿ. ಅಧ್ಯಕ್ಷ ಹಾಗೂ ಶಾಸಕ ಪ್ರವೀಣ್ ಕುಮಾರ್, ಉಮ್ಮರ್‌ಕೋಯ ಅವರ ಕುಟುಂಬಸ್ಥರು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
