ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ನಾಳೆಯಿಂದ ಸಿಡ್ನಿಯಲ್ಲಿ ಆರಂಭವಾಗಲಿದೆ. ಈ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಟೀಂ ಇಂಡಿಯಾ ಪಾಳಯದಿಂದ ಸ್ಫೋಟಕ ಸುದ್ದಿಯೊಂದ ಹೊರಬಿದ್ದಿದೆ.
ಆ ಪ್ರಕಾರ ತಂಡದ ನಾಯಕ ರೋಹಿತ್ ಶರ್ಮಾರನ್ನು ಈ ಟೆಸ್ಟ್ ಪಂದ್ಯದಿಂದ ಹೊರಗಿಡಲು ನಿರ್ಧರಿಸಲಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ರೋಹಿತ್ ಬದಲಿಗೆ ಜಸ್ಪ್ರೀತ್ ಬುಮ್ರಾ ನಾಯಕರಾಗಲಿದ್ದು, ಶುಭ್ಮನ್ ಗಿಲ್ ಅವರನ್ನು ಆಡುವ ಹನ್ನೊಂದರ ಬಳಗಕ್ಕೆ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ವಾಸ್ತವವಾಗಿ ತಂಡದ ನಿಯಮಿತ ನಾಯಕ ರೋಹಿತ್ ಶರ್ಮಾ ಕಳೆದ ಕೆಲವು ದಿನಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಈ ಹಿಂದೆ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದಿದ್ದ ಟೆಸ್ಟ್ ಸರಣಿ ಮತ್ತು ನ್ಯೂಜಿಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿಯಲ್ಲಿಯೂ ರೋಹಿತ್ ಬ್ಯಾಟ್ ಮೌನಕ್ಕೆ ಶರಣಾಗಿತ್ತು. ಅದಲ್ಲದೆ ಇದೀಗ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ರೋಹಿತ್ ಎರಡಂಕಿ ದಾಟಲು ಕಷ್ಟಪಡುತ್ತಿದ್ದಾರೆ. ಹೀಗಾಗಿ ರೋಹಿತ್ರನ್ನು ಟೆಸ್ಟ್ ತಂಡದಿಂದ ಕೈಬಿಡುವುದರ ಜೊತೆಗೆ ನಾಯಕತ್ವದಿಂದಲೂ ಕೆಳಗಿಳಿಸಬೇಕು ಎಂಬ ಕೂಗು ಜೋರಾಗಿ ಕೇಳಿಬಂದಿತ್ತು. ಇದೀಗ ವರದಿಯಾಗಿರುವಂತೆ ರೋಹಿತ್ರನ್ನು ಕೊನೆಯ ಟೆಸ್ಟ್ನಿಂದ ಹೊರಗಿಡಲಾಗಿದೆ. ಇದರ ಜೊತೆಗೆ ರೋಹಿತ್ ಅವರ ಟೆಸ್ಟ್ ವೃತ್ತಿಜೀವನ ಭಾಗಶಃ ಅಂತ್ಯವಾಗಿದೆ ಎಂತಲೇ ಹೇಳಲಾಗುತ್ತಿದೆ.
ಇದು ರೋಹಿತ್ ನಿರ್ಧಾರ?
ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಸ್ವತಃ ರೋಹಿತ್ ಶರ್ಮಾ ಅವರೇ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ತಮ್ಮ ಕಳಪೆ ಫಾರ್ಮ್ ಅನ್ನು ಗಮನದಲ್ಲಿಟ್ಟುಕೊಂಡು ರೋಹಿತ್ ಶರ್ಮಾ ಅವರು ಸಿಡ್ನಿಯಲ್ಲಿ ಆಡುವುದಿಲ್ಲ ಎಂದು ತಂಡದ ಮ್ಯಾನೇಜ್‌ಮೆಂಟ್‌ಗೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ರೋಹಿತ್ ಅವರು ಈ ಬಗ್ಗೆ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರಿಗೆ ತಿಳಿಸಿದ್ದು, ನಾಯಕನ ಈ ನಿರ್ಧಾರವನ್ನು ಗಂಭೀರ್ ಮತ್ತು ಅಗರ್ಕರ್ ಇಬ್ಬರೂ ಒಪ್ಪಿಕೊಂಡಿದ್ದಾರೆ ಎಂದು ವರದಿ ಮಾಡಿದೆ. ಒಂದು ವೇಳೆ ನಾಳಿನ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಆಡದಿದ್ದರೆ, ಅವರ ಟೆಸ್ಟ್ ವೃತ್ತಿಜೀವನ ಭಾಗಶಃ ಅಂತ್ಯವಾಗಲಿದೆ. ಇದಕ್ಕೂ ಮುನ್ನವೇ ಈ ಟೆಸ್ಟ್ ಸರಣಿಯ ನಂತರ ರೋಹಿತ್ ಟೆಸ್ಟ್ನಿಂದ ನಿವೃತ್ತಿಯಾಗಲಿದ್ದಾರೆ ಎಂಬ ವರದಿಗಳು ಕೇಳಿಬಂದಿದ್ದವು. ಆ ಪ್ರಕಾರ ರೋಹಿತ್ ಸಿಡ್ನಿಯಲ್ಲಿ ಕೊನೆಯ ಟೆಸ್ಟ್ ಆಡುವುದರೊಂದಿಗೆ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ವಿದಾಯ ಹೇಳಲಿದ್ದಾರೆ ಎನ್ನಲಾಗುತ್ತಿತ್ತು. ಆದರೀಗ ಸಿಡ್ನಿ ಟೆಸ್ಟ್‌ನಿಂದ ಹೊರಗುಳಿದಿರುವ ರೋಹಿತ್ಗೆ ಮೆಲ್ಬೋರ್ನ್ ಟೆಸ್ಟ್ ಅವರ ವೃತ್ತಿಜೀವನದ ಕೊನೆಯ ಟೆಸ್ಟ್ ಆಗುವ ಸಾಧ್ಯತೆಗಳು ಹೆಚ್ಚಿವೆ. ಒಂದು ವೇಳೆ ಟೀಂ ಇಂಡಿಯಾ ಸಿಡ್ನಿ ಟೆಸ್ಟ್‌ನಲ್ಲಿ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಿದರೂ, ಆ ಪ್ರಶಸ್ತಿ ಕದನಕ್ಕೆ ರೋಹಿತ್ ಆಯ್ಕೆಯಾಗದಿರುವ ಸಾಧ್ಯತೆಯಿದೆ. ಅಂದರೆ, ತಂಡವು ಫೈನಲ್ ತಲುಪಿದರೆ ಜಸ್ಪ್ರೀತ್ ಬುಮ್ರಾ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ.