ಸುಳ್ಯ: ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ.) ಬಿಎಂಎಸ್ ಸಂಯೋಜಿತ ಸುಳ್ಯ ಇದರ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಹಾಗೂ ಸಂಘದ ಸರ್ವ ಸದಸ್ಯರ ಮತ್ತು ಹಿತೈಷಿಗಳ ಶ್ರೇಯಾಭಿವೃದ್ಧಿಗಾಗಿ ಹಮ್ಮಿಕೊಳ್ಳಲಾಗಿರುವ 27ನೇ ವರುಷದ ಸಾರ್ವಜನಿಕ ಶ್ರೀ ಶನೇಶ್ಚರ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಇಂದು ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ಮುಂಭಾಗದಲ್ಲಿ ಅತ್ಯಂತ ಸಂಭ್ರಮದಿಂದ ನೆರವೇರಿತು.
ಶ್ರೀ ಕಲ್ಕುಡ ಕಲ್ಲುರ್ಟಿ ಆಡಳಿತ ಸಮಿತಿಯ ಆಡಳಿತ ಧರ್ಮದರ್ಶಿಗಳಾದ ಶ್ರೀಯುತ ಉಮೇಶ್ ಪಿ.ಕೆ. ಹಾಗೂ ಸಂಘದ ಹಿರಿಯ ಸದಸ್ಯರಾದ ವಿಶ್ವನಾಥ ಅಡ್ಪಂಗಯ ನಂಜುಂಡ ಅವರು ಜಂಟಿಯಾಗಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ನವೆಂಬರ್ 28 ರಂದು ಪೂಜಾ ಕಾರ್ಯಕ್ರಮ: ಬರುವ ಶುಭ ದಿನಾಂಕ 28/11/2026 (ಶನಿವಾರ) ರಂದು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ 27ನೇ ವರುಷದ ಸಾರ್ವಜನಿಕ ಶ್ರೀ ಶನೇಶ್ಚರ ಪೂಜಾ ಮಹೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾದ ಪ್ರಕಾಶ್ ಎಂ.ಎಸ್., ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ., ಕೋಶಾಧಿಕಾರಿ ರವಿ ಎಸ್., ಸಂಘಟನಾ ಕಾರ್ಯದರ್ಶಿ ಸುಂದರ್ ಪೆರಾಜೆ, ಜಂಟಿ ಕಾರ್ಯದರ್ಶಿ ಸುರೇಂದ್ರ ಕಾಮತ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಲ್ಕುಡ ದೈವಸ್ಥಾನದ ಧರ್ಮದರ್ಶಿ ಭಾಸ್ಕರ್ ಐಡಿಯಲ್, ಪೂಜಾರಿಗಳಾದ ತಿಮ್ಮಪ್ಪ ನಾವೂರು, ನಿರ್ದೇಶಕರಾದ ಭಾನು ಪ್ರಕಾಶ್, ಹರೀಶ್ ನೆಕ್ರಾಜೆ, ಶಂಕರ, ವೇಣು ಗೋಪಾಲ ಕುರುಂಜಿಬಾಗ್, ಜನಾರ್ದನ ಶ್ರೀ ರಾಮ್ ಪೇಟೆ, ರೋಹಿತ್ ಗಾಂಧಿನಗರ, ಸುರೇಶ್ ಕುರುಂಜಿಬಾಗ್, ಜಗದೀಶ್ ಎನ್.ಆರ್., ಚಾಮಯ್ಯ ಮಾರ್ಕೆಟ್ ರಸ್ತೆ, ಲೋಕೇಶ್ ಬಸ್ ನಿಲ್ದಾಣ ಸೇರಿದಂತೆ ಸಂಘದ ಹಿತೈಷಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
