ಕೆವಿಜಿ ಗೌಡ ಪಾಲಿಟೆಕ್ನಿಕ್‌ : ವಾರ್ಷಿಕ ಕ್ರೀಡಾಕೂಟ

News Sports

ಸುಳ್ಯ: ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್‌ನ ವಾರ್ಷಿಕ ಕ್ರೀಡಾಕೂಟವು ಸಂಭ್ರಮದಿಂದ ನಡೆಯಿತು. ಎ.ಒ.ಎಲ್.ಇ. ಕಮಿಟಿ “ಬಿ”ಯ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಸಂಸ್ಥೆಯ ಪ್ರಾಂಶುಪಾಲ ಅಣ್ಣಯ್ಯ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ.ವಿ.ಜಿ. ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಚಂದ್ರಶೇಖರ ಎ. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಭವಾನಿಶಂಕರ ಅಡ್ತಲೆ ಅವರು, ಕ್ರೀಡೆ ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಶಿಸ್ತು, ಆತ್ಮವಿಶ್ವಾಸ, ಸಹಕಾರ ಮನೋಭಾವ ಮತ್ತು ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಗುಣಗಳನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾದ ಡಾ. ಚಂದ್ರಶೇಖರ ಎ. ಅವರು ಮಾತನಾಡಿ, ಶಿಕ್ಷಣದ ಜೊತೆಗೆ ಕ್ರೀಡೆಗೂ ಸಮಾನ ಮಹತ್ವ ನೀಡಬೇಕು. ಕ್ರೀಡಾಕೂಟವು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಮಯಪಾಲನೆ, ತಂಡದ ಮನೋಭಾವ ಮತ್ತು ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ಕ್ರೀಡಾಸ್ಫೂರ್ತಿಯಿಂದ ಸ್ಪರ್ಧಿಸಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಅಣ್ಣಯ್ಯ ಕೆ. ಅವರು ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳೊಂದಿಗೆ ಕ್ರೀಡೆಗಳಲ್ಲಿಯೂ ಆಸಕ್ತಿ ಬೆಳೆಸಿಕೊಂಡು ಸಂಸ್ಥೆಗೆ ಕೀರ್ತಿ ತರಬೇಕು ಎಂದು ಹಾರೈಸಿದರು.

ಸಮಾರಂಭದಲ್ಲಿ ಉಪಪ್ರಾಂಶುಪಾಲ ಹರೀಶ್ ಕುಮಾರ್ ಪಿ., ಕ್ರೀಡಾ ಸಂಯೋಜಕ ಅಣ್ಣಪ್ಪ ಜಿ.ಕೆ., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರಭುಲಿಂಗ ಡಿ.ಹೆಚ್. ಹಾಗೂ ಕಚೇರಿ ಅಧೀಕ್ಷಕ ಶಿವರಾಮ ಕೇರ್ಪಳ ಉಪಸ್ಥಿತರಿದ್ದರು.

ವಿದ್ಯಾರ್ಥಿ ಪ್ರತಿನಿಧಿ ಜಬೀರ್ ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ಮನ್ವಿತ್ ಆಳ್ವ ಕ್ರೀಡಾ ಪ್ರಮಾಣವಚನ ಬೋಧಿಸಿದರು. ಚಂದ್ರಶೇಖರ ಬಿಳಿನೆಲೆ ಅವರು ಕಾರ್ಯಕ್ರಮ ನಿರೂಪಿಸಿದರು. ದೀವಿತಾ ಕೆ.ವೈ. ಅವರು ವಂದನಾರ್ಪಣೆ ಮಾಡಿದರು.

ಕ್ರೀಡಾಕೂಟದ ನಿರ್ವಹಣೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಜಯಚಂದ್ರ, ತೀರ್ಥವರ್ಣ, ಆಶಾ ಜ್ಯೋತಿ ಹಾಗೂ ಅಕ್ಷತಾ ಸಹಕರಿಸಿದರು.

Leave a Reply

Your email address will not be published. Required fields are marked *