ವಿರಾಟ್ ಕೊಹ್ಲಿ ಅವರ ಅಜೇಯ ಶತಕದ (100) ಸಹಾಯದಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 6 ವಿಕೆಟ್ಗಳಿಂದ ಮಣಿಸಿ 2017ರ ಫೈನಲ್ ಸೋಲಿನ ಸೇಡು ತೀರಿಸಿಕೊಂಡ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶ ಖಾತ್ರಿಪಡಿಸಿಕೊಂಡಿದೆ. ಇದರೊಂದಿಗೆ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ 3-3ರಲ್ಲಿ ಸಮಬಲ ಸಾಧಿಸಿತು. ಆದರೆ ಸತತ ಎರಡು ಸೋಲುಗಳೊಂದಿಗೆ ಮಹತ್ವದ ಟೂರ್ನಿಗೆ ಆತಿಥ್ಯ ವಹಿಸಿರುವ ಪಾಕಿಸ್ತಾನ ಟೂರ್ನಿಯಿಂದಲೇ ಹೊರಬಿದ್ದಿದೆ. ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಪಾಕ್ ಒಡ್ಡಿದ್ದ 242 ರನ್ ಗುರಿಯನ್ನು ಭಾರತ 42.3 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗೆಲುವಿನ ಗೆರೆ ದಾಟಿತು. 242 ರನ್ ಬೆನ್ನಟ್ಟಿದ ಭಾರತ ಬಿರುಸಿನ ಆರಂಭ ಪಡೆಯಿತು. ವೇಗದ ಆಟಕ್ಕೆ ಒತ್ತು ಕೊಟ್ಟ ನಾಯಕ ರೋಹಿತ್ ಶರ್ಮಾ 15 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 20 ರನ್ ಗಳಿಸಿ ನಿರಾಸೆ ಮೂಡಿಸಿದರು. ಶಾಹೀನ್ ಅಫ್ರಿದಿ ಪಾಕ್ಗೆ ಆರಂಭದಲ್ಲೇ ಮುನ್ನಡೆ ತಂದುಕೊಟ್ಟು ಗೆಲುವಿನ ಆಸೆ ಹೆಚ್ಚಿಸಿದರು. ಆದರೆ, ಗೆಲುವಿನ ಕನಸು ಕಂಡಿದ್ದ ಪಾಕ್ಗೆ ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಎಳ್ಳುನೀರು ಬಿಟ್ಟರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಗಿಲ್ ಮತ್ತೊಂದು ಸೊಗಸಾದ ಇನ್ನಿಂಗ್ಸ್ ಕಟ್ಟಿದರು. ಆದರೆ 46 ರನ್ ಗಳಿಸಿ ಅರ್ಧಶತಕದ ಅಂಚಿನಲ್ಲಿ ಎಡವಿದರು. ನಂತರ ಕೊಹ್ಲಿ ಮತ್ತು 114 ರನ್ಗಳ ಜೊತೆಯಾಟವಾಡಿದರು. ಇಬ್ಬರು ಸ್ಟ್ರೈಕ್ ರೊಟೇಟ್ ಮಾಡಿದ್ದು, ಅದ್ಭುತವಾಗಿತ್ತು. ಇನ್ನೇನು ಪಂದ್ಯವನ್ನು ಮುಗಿಸಬೇಕು ಎನ್ನುವಾಗ 53 ರನ್ ಗಳಿಸಿದ್ದ ಅಯ್ಯರ್ ಔಟಾದರು. ಕಳೆದ ಪಂದ್ಯದಲ್ಲಿ 22 ರನ್ ಸಿಡಿಸಿ ನಿರಾಸೆ ಮೂಡಿಸಿದ್ದ ಕೊಹ್ಲಿ, ತನ್ನ ಸಾಮರ್ಥ್ಯ ಇನ್ನೂ ತಗ್ಗಿಲ್ಲ ಎಂಬುದನ್ನು ಈ ಪಂದ್ಯದಲ್ಲಿ ನಿರೂಪಿಸಿದರು. ತಾನೊಬ್ಬ ಬಿಗ್ ಮ್ಯಾಚ್ ಪ್ಲೇಯರ್ ಎಂಬುದನ್ನು ಮತ್ತೆ ಸಾಬೀತುಪಡಿಸಿದರು. ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 14 ಸಾವಿರ ರನ್ ಪೂರೈಸಿದ ಕೊಹ್ಲಿ 96ರನ್ ಗಳಿಸಿದ್ದಾಗ ಬೌಂಡರಿ ಸಿಡಿಸಿ 51ನೇ ಏಕದಿನ ಶತಕ ಪೂರೈಸಿದರು.  ಇದು ಗೆಲುವಿನ ಬೌಂಡರಿಯೂ ಆಗಿತ್ತು. ಆಗ ತಂಡದ ಗೆಲುವಿಗೆ ಕೇವಲ 2 ರನ್ ಬೇಕಿತ್ತು. 111 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 100 ರನ್ ಗಳಿಸಿ ಪಾಕ್ ತಂಡವನ್ನು ಸೋಲಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರ 82ನೇ ಶತಕವಿದು. ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ 8 ರನ್ ಗಳಿಸಿ ಔಟಾದರು. ಅಕ್ಷರ್ ಪಟೇಲ್ ಅಜೇಯ 3 ರನ್ ಸಿಡಿಸಿದರು. ಇತನ್ಮದ್ಯೆ ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ದಾಖಲೆಯಾಟ ಮುಂದುವರೆದಿದೆ. ಪಾಕಿಸ್ತಾನ ವಿರುದ್ಧ ಸದಾ ಅಬ್ಬರಿಸುವ ಅವರು, ಇದೀಗ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧದ ಪಂದ್ಯದಲ್ಲೇ ಮತ್ತೊಂದು ವಿಶೇಷ ಮೈಲಿಗಲ್ಲು ಸಾಧಿಸಿದ್ದಾರೆ. ಚಾಂಪಿಯನ್ಸ್‌ ಟ್ರೋಫಿ ಪಂದ್ಯದಲ್ಲಿ ಪಾಕ್‌ ವಿರುದ್ಧ 14 ರನ್‌ ಕಲೆ ಹಾಕುವ ಮೂಲಕ ಏಕದಿನ ಸ್ವರೂಪದಲ್ಲಿ ಒಟ್ಟು 14000 ರನ್‌ ಗಡಿ ದಾಟಿದ್ದಾರೆ. ಪಂದ್ಯದಲ್ಲಿ ಹ್ಯಾರಿಸ್‌ ರೌಫ್‌ ಎಸೆತಕ್ಕೆ ಆಕರ್ಷಕ ಬೌಂಡರಿ ಬಾರಿಸಿದ ಅವರು, ಈ ಮೈಲಿಗಲ್ಲು ತಲುಪಿದರು.

Leave a Reply

Your email address will not be published. Required fields are marked *