ಸುಳ್ಯ: ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸರ್ಕಾರದಿಂದ ಮಂಜೂರಾಗಿರುವ ಹೆಚ್ಚುವರಿ ಕನಿಷ್ಠ ವೇತನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ, ನೌಕರರು ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ (ಸಚಿವ ದರ್ಜೆ) ಟಿ.ಎಂ ಶಾಹೀದ್ ತೆಕ್ಕಿಲ್ ಇವರಿಗೆ ಮನವಿ ಸಲ್ಲಿಸಲಾಯಿತು.
ಸುಮಾರು 2001 ಹಾಗೂ 2017ರಿಂದ ಒಟ್ಟು 24 ನೌಕರರು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಆದೇಶದಂತೆ ಜೂನ್ ತಿಂಗಳ ಹೆಚ್ಚುವರಿ ಕನಿಷ್ಠ ವೇತನವು ಒಮ್ಮೆ ಮಾತ್ರ ಖಾತೆಗೆ ಜಮೆಯಾಗಿದ್ದು, ಆ ಬಳಿಕ ಇದುವರೆಗೆ ಯಾವುದೇ ಹೆಚ್ಚುವರಿ ಕನಿಷ್ಠ ವೇತನ ಬಂದಿರುವುದಿಲ್ಲ. ಇದರಿಂದಾಗಿ ನೌಕರರು ತಮ್ಮ ಕುಟುಂಬದ ದೈನಂದಿನ ಜೀವನ ನಿರ್ವಹಣೆ ಮಾಡಲು ಮತ್ತು ಸಂಸಾರ ನಡೆಸಲು ತೀವ್ರ ತೊಂದರೆಯನ್ನು ಎದುರಿಸುತ್ತಿದ್ದಾರೆ.
ವೇತನ ಆಯೋಗದಿಂದ ಮಂಜೂರಾಗಿ ಬಾಕಿ ಇರುವ ಹೆಚ್ಚುವರಿ ಕನಿಷ್ಠ ವೇತನವನ್ನು ನೌಕರರಿಗೆ ತಲುಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡುವಂತೆ ಹಾಗೂ ನೌಕರರ ಕುಟುಂಬಗಳ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿಯಲ್ಲಿ ವಿನಂತಿಸಲಾಗಿದೆ. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಆಸ್ಪತ್ರೆ ಆರೋಗ್ಯ ರಕ್ಷಾ ಸಮೀತಿ ಸದಸ್ಯರಾದ ಶಹೀದ್ ಪಾರೆ, ಆಡಳಿತ ವ್ಯೆದಾಧಿಕಾರಿ ಡಾ ನವೀನ್, ಗ್ರೂಪ್ ಡಿ ನೌಕರರಾದ, ದಯಾನಂದ, ದೀಕ್ಷಿತ್, ನಾಗೇಶ್, ದಿನೇಶ, ಭಾವಣಿಶಂಕರ, ಸುಶೀಲ, ವಸಂತಿ ಮೊದಲಾದವರು ಉಪಸ್ಥಿತರಿದ್ದರು
ಈ ಮನವಿ ಪತ್ರಕ್ಕೆ ದಯಾನಂದ ಕೆ., ದಿನೇಶ್, ಲೀಲಾದರ್ ಎನ್.ಆರ್., ರವಿಪ್ರಕಾಶ್, ನಾಗೇಶ್ ಕೆ., ದೀಕ್ಷಿತ್ ಎ.ಎಲ್., ಭವಾನಿಶಂಕರ ಪಿ.ಎಂ., ವಾಸಂತಿ ಕೆ., ಭವಾನಿ, ಸುಶೀಲಾ, ಭಾಗೀರಥಿ, ದಿವ್ಯಮಣಿ, ಸವಿತಾ ಎಂ.ಡಿ., ಜಯಂತಿ, ಪುಷ್ಪಾವತಿ, ಸುಜಾತಾ, ಶಾಲಿನಿ, ಅರುಣ್ ಜ್ಯೋತಿ, ಭಾಗ್ಯಶ್ರೀ ಪಿ., ಸಂಧ್ಯಾ ಕೆ.ಎಸ್., ಚೈತನ್ಯ, ಧನ್ಯ ಕೆ.ಎಸ್., ಹರಿಣಾಕ್ಷಿ ಎನ್.ಪಿ., ಬೇಬಿ ಸೇರಿದಂತೆ ಒಟ್ಟು 24 ಹೊರಗುತ್ತಿಗೆ ನೌಕರರು ಸಹಿ ಮಾಡಿ ಆಗ್ರಹಿಸಿದ್ದಾರೆ.
