ದೆಹಲಿಯ ಮಹಿಪಾಲ್‌ಪುರದ ಹೋಟೆಲ್‌ನಲ್ಲಿ ಬ್ರಿಟಿಷ್ ಮಹಿಳೆಯ ಮೇಲೆ ಇಬ್ಬರು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳಲ್ಲಿ ಒಬ್ಬನಾದ ಕೈಲಾಶ್, ಇನ್‌ಸ್ಟಾಗ್ರಾಮ್‌ನಲ್ಲಿ ಸಂತ್ರಸ್ತೆಯ ಜೊತೆ ಸ್ನೇಹ ಬೆಳೆಸಿಕೊಂಡಿದ್ದ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ದೆಹಲಿ ಪೊಲೀಸರು ಇಬ್ಬರೂ ಶಂಕಿತರನ್ನು ಬಂಧಿಸಿ, ಘಟನೆಯ ಬಗ್ಗೆ ಬ್ರಿಟಿಷ್ ಹೈಕಮಿಷನ್‌ಗೆ ಮಾಹಿತಿ ನೀಡಿದ್ದಾರೆ. “ದೆಹಲಿಯ ಮಹಿಪಾಲಪುರದ ಹೋಟೆಲ್‌ನಲ್ಲಿ ಬ್ರಿಟಿಷ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಸಹಚರನನ್ನು ಲೈಂಗಿಕ ಕಿರುಕುಳದ ಆರೋಪದ ಮೇಲೆ ಬಂಧಿಸಲಾಗಿದೆ ”ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಸಾಮಾಜಿಕ ಮಾಧ್ಯಮದ ಮೂಲಕ ಆ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ ಮಹಿಳೆ, ಆತನನ್ನು ಭೇಟಿಯಾಗಲು ಯುಕೆಯಿಂದ ದೆಹಲಿಗೆ ಬಂದಿದ್ದಳು. ಘಟನೆಯ ಬಗ್ಗೆ ಬ್ರಿಟಿಷ್ ಹೈಕಮಿಷನ್‌ಗೆ ಮಾಹಿತಿಯನ್ನು ನೀಡಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಹೋಟೆಲ್‌ನ ಲಿಫ್ಟ್‌ನಲ್ಲಿ ಮನೆಗೆಲಸದ ಸಿಬ್ಬಂದಿಯೊಬ್ಬರು ಆಕೆಗೆ ಮೊದಲು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಂತರ ಸಾಮಾಜಿಕ ಜಾಲತಾಣದಿಂದ ಪರಿಚಿತನಾಗಿದ್ದ ವ್ಯಕ್ತಿಯಿಂದ ಹೋಟೆಲ್ ಕೋಣೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ. ಪೂರ್ವ ದೆಹಲಿಯ ಮಯೂರ್ ವಿಹಾರ್‌ನ ವಸುಂಧರ ನಿವಾಸಿ ಕೈಲಾಶ್‌ಗೆ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಮಾಡುವ ಒಲವು ಇದೆ. ಕೆಲವು ತಿಂಗಳ ಹಿಂದೆ, ಅವರು ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ಲಂಡನ್ ನಿವಾಸಿಯಾದ ಮಹಿಳೆಯೊಂದಿಗೆ ಸಂಪರ್ಕ ಸಾಧಿಸಿದರು. ಆ ಮಹಿಳೆ ಮಹಾರಾಷ್ಟ್ರ ಮತ್ತು ಗೋವಾಕ್ಕೆ ಭೇಟಿ ನೀಡಿದ್ದಾಗ ಕೈಲಾಶ್ ಅವರನ್ನು ಸಂಪರ್ಕಿಸಿ ತನ್ನನ್ನು ಭೇಟಿಯಾಗಲು ಆಹ್ವಾನಿಸಿದಳು. ಆದಾಗ್ಯೂ ಕೈಲಾಶ್ ಪ್ರಯಾಣಿಸಲು ತನ್ನ ಅಸಾಮರ್ಥ್ಯವನ್ನು ವ್ಯಕ್ತಪಡಿಸಿದನು ಮತ್ತು ಬದಲಿಗೆ ದೆಹಲಿಗೆ ಭೇಟಿ ನೀಡುವಂತೆ ಅವಳನ್ನು ಕೇಳಿಕೊಂಡನು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮಂಗಳವಾರ ಸಂಜೆ, ಮಹಿಳೆ ದೆಹಲಿಗೆ ಆಗಮಿಸಿ ಮಹಿಪಾಲ್‌ಪುರದ ಹೋಟೆಲ್‌ನಲ್ಲಿ ವಾಸಿಸುತ್ತಿದ್ದರು. ಆಕೆಯ ಆಹ್ವಾನಕ್ಕೆ ಓಗೊಟ್ಟು, ಕೈಲಾಶ್ ತನ್ನ ಸ್ನೇಹಿತ ವಾಸಿಮ್ ಜೊತೆಗೂಡಿ, ಹೋಟೆಲ್‌ನಲ್ಲಿ ಆಕೆಯನ್ನು ಭೇಟಿ ಮಾಡಿದನು. ಮೂವರು ಮದ್ಯ ಸೇವಿಸಿ ಊಟ ಮಾಡಿ ನಂತರ ಆಕೆಯ ಕೋಣೆಗೆ ತೆರಳಿದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *