ಹೆಚ್ಚುವರಿ ಅವಧಿಯ ಆಟದಲ್ಲಿ ಲೊತಾರೊ ಮಾರ್ಟಿನೆಜ್‌ ಹೊಡೆದ ಗೋಲಿನಿಂದ ಆರ್ಜೆಂಟೀನಾ ತಂಡ ಭಾನುವಾರ 1-0 ಯಿಂದ ಕೊಲಂಬಿಯಾ ತಂಡವನ್ನುಸೋಲಿಸಿ ಕೊಪಾ ಅಮೆರಿಕ ಟೂರ್ನಿಯಲ್ಲಿ ದಾಖಲೆ 16ನೇ ಬಾರಿ ಚಾಂಪಿಯನ್ ಕಿರೀಟ ಧರಿಸಿತು. ಹಾರ್ಡ್‌ರಾಕ್‌ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯ 82 ನಿಮಿಷ ತಡವಾಗಿ ಆರಂಭವಾಯಿತು.

ಟಿಕೆಟ್ ಪಡೆದವರು ಒಳಗೆ ಹೋಗುತ್ತಿದ್ದಂತೆ, ಕ್ರೀಡಾಂಗಣದ ಹೊರಗೆ ಜಮಾಯಿಸಿದ್ದ ಇತರ ಅಭಿಮಾನಿಗಳೂ ಒಮ್ಮೆಲೇ ಒಳಗೆ ನುಗ್ಗಿದರು. ಪರಿಸ್ಥಿತಿಯನ್ನು ತಹಬಂದಿಗೆ ತರಲು ಭದ್ರತಾ ಸಿಬ್ಬಂದಿ ಪರದಾಡಿದರು. ನೂಕುನುಗ್ಗಲಿನಲ್ಲಿ ಕೆಲವರು ಅಸ್ವಸ್ಥರಾದರು.

ಆರ್ಜೆಂಟೀನಾ ಗೆಲುವಿನ ಸಂಭ್ರಮಕ್ಕೆ ಮುನ್ನ ಆ ತಂಡಕ್ಕೆ ದುಗುಡದ ಕ್ಷಣವೂ ಎದುರಾಯಿತು. ನಾಯಕ ಲಯೊನೆಲ್ ಮೆಸ್ಸಿ, ಪಂದ್ಯದ 66ನೇ ನಿಮಿಷ ಕಾಲಿನ ಗಾಯದಿಂದ ಹೊರನಡೆದರು. ಪಂದ್ಯದ ಉಳಿದ ಭಾಗವನ್ನು ಬೆಂಚ್‌ನಿಂದ ವೀಕ್ಷಿಸಿದರು.

ಇತ್ತಂಡಗಳಿಗೆ ಪಂದ್ಯದಲ್ಲಿ ಉತ್ತಮ ಗೋಲು ಅವಕಾಶಗಳು ದೊರಕಿದ್ದು ಕಡಿಮೆ. ಸಬ್‌ಸ್ಟಿಟ್ಯೂಟ್‌ ಮಾರ್ಟಿನೆಜ್‌ ಹೆಚ್ಚುವರಿ ಅವಧಿಯ 23ನೇ ನಿಮಿಷ ಆಕರ್ಷಕ ಗೋಲು ಗಳಿಸಿದರು. ಟೂರ್ನಿಯಲ್ಲಿ ಅವರು ಐದು ಗೋಲುಗಳೊಂದಿಗೆ ‘ಟಾಪ್‌ ಸ್ಕೋರರ್‌’ ಎನಿಸಿದರು.

‌ಇದು ಆರ್ಜೆಂಟೀನಾ ಗೆಲ್ಲುತ್ತಿರುವ ಸತತ ಮೂರನೇ ಪ್ರಮುಖ ಪ್ರಶಸ್ತಿ ಆಗಿದೆ. 2021ರ ಕೊಪಾ ಅಮೆರಿಕ ಟೂರ್ನಿಯಲ್ಲಿ ವಿಜೇತರಾಗಿದ್ದ ಆರ್ಜೆಂಟೀನಾ, ಎರಡು ವರ್ಷಗಳ ಹಿಂದೆ ಕತಾರ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗಿ ಮೆರೆದಿತ್ತು. ಅದರ ಕಿರೀಟಕ್ಕೆ ಈಗ ಇನ್ನೊಂದು ತುರಾಯಿ.

ಕೊನೆಯ ಪಂದ್ಯ ಆಡಿದ ಆರ್ಜೆಂಟೀನಾದ ತಾರೆ ಏಂಜೆಲ್‌ ಫ್ಯಾಬಿಯನ್‌ ಡಿ ಮರಿಯಾ ಅವರಿಗೆ ಭಾವನಾತ್ಮಕ ವಿದಾಯ ದೊರೆಯಿತು.

28 ಪಂದ್ಯಗಳಿಂದ ಅಜೇಯವಾಗಿದ್ದ ಕೊಲಂಬಿಯಾ ನಿರಾಶೆ ಕಂಡಿತು. ನೆಸ್ಟರ್‌ ಲೊರೆಂಝೊ ಗರಡಿಯ ತಂಡ ಅಂದುಕೊಂಡಂತೆ ಏನೂ ನಡೆಯಲಿಲ್ಲ. ನೆಸ್ಟರ್‌ ಆರ್ಜೆಂಟೀನಾ ಮೂಲದವರು.

ಪಂದ್ಯದ ಏಳನೆ ನಿಮಿಷ ಕೊಲಂಬಿಯಾದ ಜಾನ್‌ ಕಾರ್ಬೊಬಾ ಅವರ ಅಮೋಘ ಯತ್ನದಲ್ಲಿ ಚೆಂಡು ಗೋಲುಗಂಬದ ಕೆಳಗೆ ಬಡಿದು ಆಚೆಹೋಯಿತು. ಆದರೆ ಯಾವುದೇ ತಂಡ ಸ್ಪಷ್ಟ ಮೇಲುಗೈ ಸಾಧಿಸಲು ಆಗಲಿಲ್ಲ. ಆರ್ಜೆಂಟೀನಾಕ್ಕೂ ಉತ್ತಮ ಅವಕಾಶ ದೊರಕಿತ್ತು. ಡಿ ಮಾರಿಯಾ ಅವರು ಗೋಲಿನ ಎದುರು ನಿಂತಿದ್ದ ಮೆಸ್ಸಿ ಅವರಿಗೆ ಪಾಸ್‌ ನೀಡಿದರು. ಆದರೆ ಮೆಸ್ಸಿ ಎಡಗಾಲಿನಲ್ಲಿ ಒದ್ದ ಚೆಂಡನ್ನು ಗೋಲ್‌ಕೀಪರ್ ಕ್ಯಾಮಿಲೊ ವರ್ಗಾಸ್‌ ಸುರಕ್ಷಿತವಾಗಿ ತಡೆದರು. ಮೆಸ್ಸಿ ಮತ್ತೊಂದು ಯತ್ನದಲ್ಲಿ ಗೋಲಿನತ್ತ ಸಾಗುತ್ತಿದ್ದಾಗ ಸಾಂಟಿಯಾಗೊ ಅರಿಯಾಸ್‌ ಅವರನ್ನು ಜಾರಿ ತಡೆದರು. ಈ ಯತ್ನದಲ್ಲಿ ಮೆಸ್ಸಿ ಅವರಿಗೆ ಚಿಕಿತ್ಸೆ ಬೇಕಾಯಿತು.

ನೀರಸ ಮೊದಲಾರ್ಧದ ನಂತರ ವಿರಾಮದ ವೇಳೆ ಕೊಲಂಬಿಯಾದ ಗಾಯಕಿ ಶಕೀರಾ ಅವರ ಹಾಡುಗಳಿಂದ ಪ್ರೇಕ್ಷಕರಿಗೆ ಮನೋರಂಜನೆ ಒದಗಿತು.

Leave a Reply

Your email address will not be published. Required fields are marked *