ಮಂಗಳೂರು-ಮುಡಿಪು ಮಾರ್ಗದಲ್ಲಿ ಸಂಚರಿಸುವ ಸರಕಾರಿ ಬಸ್‌ವೊಂದರಲ್ಲಿ ನಿದ್ದೆಗೆ ಜಾರಿದ ಪ್ರಯಾಣಿಕ ಯುವತಿಯೊಬ್ಬಳಲ್ಲಿ ಅನುಚಿತವಾಗಿ ವರ್ತಿಸಿದ ಬಸ್ ನಿರ್ವಾಹಕನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಕೆಎಸ್ ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಸೇವೆಯಿಂದ ವಜಾಕ್ಕೆ ಸಚಿವರ ಸೂಚನೆ
ಮಂಗಳೂರು ವಿಭಾಗದ ಕೆಎಸ್‌ಆರ್ ಟಿಸಿ ಬಸ್ಸಿನಲ್ಲಿ ನಿರ್ವಾಹಕನೊಬ್ಬ ಮಹಿಳಾ ಪ್ರಯಾಣಿಕರೊಡನೆ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿರುವ ವಿಡಿಯೋಗೆ ಸಂಬಂಧಪಟ್ಟಂತೆ, ಮೇಲ್ನೋಟಕ್ಕೆ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ನಿರ್ವಾಹಕನನ್ನು ಅಮಾನತು ಮಾಡಲಾಗಿದೆ. ಬಸ್ಸಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಹೆಣ್ಣು ಮಕ್ಕಳೊಡನೆ ಗೌರವದೊಂದಿಗೆ ನಡೆದುಕೊಳ್ಳುವುದು ನಮ್ಮ ಸಿಬಂದಿ ಆದ್ಯ ಕರ್ತವ್ಯ. ಈ ರೀತಿಯ ಅಸಹ್ಯಕರ ನಡವಳಿಕೆ ಅಕ್ಷಮ್ಯ ಅಪರಾಧ. ಈ ಘಟನೆಗೆ ಸಂಬಂಧಪಟ್ಟಂತೆ ಕೂಡಲೇ ವಿಚಾರಣಾ ಪ್ರಕ್ರಿಯೆ ಪ್ರಾರಂಭಿಸಿ, ತ್ವರಿತವಾಗಿ ವಿಚಾರಣೆ ಮುಗಿಸಿ, ಆ ನಿರ್ವಾಹಕನನ್ನು ಸೇವೆಯಿಂದಲೇ ವಜಾ ಮಾಡಲು ಕ್ರಮಕೈಗೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕೆಎಸ್‌ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.