ಮಂಗಳೂರು: ನಗರ ಹೊರವಲಯದ ಕುಡುಪು ಬಳಿ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಗುಂಪು ಹಲ್ಲೆಗೆ ಒಳಗಾದ ಕೇರಳದ ಪುಲ್ಪಳ್ಳಿ ನಿವಾಸಿ ಮೊಹಮ್ಮದ್ ಅಶ್ರಫ್ ಕುಟುಂಬದ ಮೇಲೆ ಕೆಲವು ವರ್ಷಗಳಿಂದ ಸತತವಾಗಿ ದುರಂತಗಳ ಸಿಡಿಲು ಬಡಿಯುತ್ತಲೇ ಇವೆ. ಪುಲ್ಪಳ್ಳಿಯ ಸಾಂದೀಪನಿ ಕಾಲೊನಿಯಲ್ಲಿ ಈ ಕುಟುಂಬ ವಾಸ ಮಾಡಲು ಆರಂಭಿಸಿದ್ದು ಮೂರು ವರ್ಷಗಳ ಹಿಂದೆ.
ಮಲಪ್ಪುರಂ ಜಿಲ್ಲೆಯ ಕೋಟಕ್ಕಲ್‌ನಲ್ಲಿದ್ದ ಆಸ್ತಿ, ಸಾಲದ ಕಾರಣಕ್ಕೆ ಜಪ್ತಿಯಾದ ಕಾರಣ ಕೆಲಸ ಅರಸುತ್ತ ಅವರ ಕುಟುಂಬ ಅಲ್ಲಿಗೆ ಬಂದಿತ್ತು. ಅಶ್ರಫ್ ಕೊಲೆಯಾಗುವ ನಾಲ್ಕು ದಿನಗಳ ಹಿಂದೆ ಅವರ ಅಜ್ಜಿ (ತಾಯಿಯ ಅಮ್ಮ) ಸಾವಿಗೀಡಾಗಿದ್ದರು.
ಕುಂಞಾಪು ಅವರ ಪುತ್ರ ಅಶ್ರಫ್‌ಗೆ ಇಬ್ಬರು ಸಹೋದರಿಯರು ಮತ್ತು ಇಬ್ಬರು ಸಹೋದರರು ಇದ್ದಾರೆ. ಸಹೋದರಿಯರಿಬ್ಬರಿಗೆ ಮದುವೆಯಾಗಿದ್ದು ಪ್ಲಸ್-2 ಓದಿರುವ ಅಣ್ಣ ಅಬ್ದುಲ್ ಹಮೀದ್ ಪುಲ್ಪಳ್ಳಿಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಬಿಕಾಂ ಮಾಡಿರುವ ತಮ್ಮ ಅಬ್ದುಲ್ ಜಬ್ಬಾರ್ ಮೂರು ತಿಂಗಳ ಹಿಂದೆ ಕೊಚ್ಚಿಯಲ್ಲಿ ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಸ್ಟಾರ್ಟ್ ಅಪ್ ಆರಂಭಿಸಿದ್ದಾರೆ. ಅಬ್ದುಲ್ ಜಬ್ಬಾರ್, ಕೊಲೆಯಾದ ಅಶ್ರಫ್ ಸಹೋದರ ಕೇವಲ ಒಂದೆರಡು ತಾಸುಗಳಲ್ಲಿ ಮಂಗಳೂರಿನ ಜನರ ಸ್ನೇಹಕ್ಕೆ ಸೋತಿದ್ದೆ. ಇಂಥ ಊರಲ್ಲಿ ಕೊಲೆ ನಡೆದದ್ದೇ ಅಚ್ಚರಿ. ಅಣ್ಣನನ್ನು ಕೊಂದವರಿಗೆ ಎಂದಾದರೂ ಪಶ್ಚಾತ್ತಾಪ ಆಗಿಯೇ ಆಗುತ್ತದೆ.
‘ಉದ್ಯಮ ಆರಂಭಿಸುವುದಕ್ಕಾಗಿ ಬ್ಯಾಂಕ್‌ನಿಂದ ಸಾಲ ಪಡೆಯಲಾಗಿತ್ತು. ಅದನ್ನು ತೀರಿಸಲಾಗದ ಕಾರಣ ಮೂರು ವರ್ಷಗಳ ಹಿಂದೆ ಪುಲ್ಪಳ್ಳಿಗೆ ಬಂದೆವು. ಅಣ್ಣ ಕೈಯಲ್ಲಿದ್ದ ಸ್ವಲ್ಪ ಹಣಕ್ಕೆ ವ್ಯಾಪಾರದಿಂದ ಬಂದ ಹಣ ಸೇರಿಸಿ ಮನೆ ಕಟ್ಟಿಸಿದ. ಆಸ್ತಿ ಜಪ್ತಿಗೆ ಕಾರಣವಾದ ಸಾಲವನ್ನು ತೀರಿಸಲು ಹೆಣಗಾಡುತ್ತಿದ್ದೇವೆ. ಸ್ಟಾರ್ಟ್ ಅಪ್ ಮೂಲಕ ಕುಟುಂಬಕ್ಕೆ ಚೇತರಿಕೆ ತುಂಬಲು ನಾನು ಪ್ರಯತ್ನಿಸುತ್ತಿದ್ದೆ. ಇದೇ ಸಂದರ್ಭದಲ್ಲಿ ಅಶ್ರಫ್ ದುರಂತ ಸಾವಿನ ಸುದ್ದಿ ತಿಳಿದು ಆಘಾತವಾಗಿದೆ’ ಎಂದು ಅಬ್ದುಲ್ ಜಬ್ಬಾರ್ ‘ ತಿಳಿಸಿದ್ದಾರೆ.
ನಮ್ಮ ಅಜ್ಜಿ ಕಳೆದ ವಾರ ತೀರಿಹೋಗಿದ್ದು. ಅದಾಗಿ ನಾಲ್ಕು ದಿನಗಳ ನಂತರ ಅಶ್ರಫ್ ಕೂಡಾ ಕೊಲೆಗೀಡಾಗಿದ್ದಾನೆ. ಆದರೆ ನಮಗೆ ವಯನಾಡ್ ಪೊಲೀಸರ ವಿಶೇಷ ದಳದ ಮೂಲಕ ವಿಷಯ ತಿಳಿದದ್ದು ಮಂಗಳವಾರ ಸಂಜೆ. ದುರಂತಗಳ ಮೇಲೆ ದುರಂತಗಳಿಂದ ಕುಟುಂಬವಿಡೀ ನಲುಗಿ ಹೋಗಿದೆ’ ಎಂದು ಅವರು ಹೇಳಿದರು.
ಅಲೆದಾಟದ ಬದುಕು?
ಎಸ್‌ಎಸ್‌ಎಲ್‌ಸಿ ಓದಿರುವ ಅಶ್ರಫ್ ಸ್ವಲ್ಪ ಮಟ್ಟಿಗೆ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಹೇಳಿದ ಜಬ್ಬಾರ್ 2005ರಲ್ಲಿ 9ನೇ ತರಗತಿಯಲ್ಲಿ ಇದ್ದಾಗ ಅಶ್ರಫ್‌ನನ್ನು ಚಿಕಿತ್ಸೆಗೆ ಒಳಪಡಿಸಲಾಗಿತ್ತು ಎಂದೂ ನಂತರ ಮಾನಸಿಕ ಆರೋಗ್ಯ ಕೇಂದ್ರಗಳಿಗೆ ನಿರಂತರ ಓಡಾಟ ನಡೆಯುತ್ತಿತ್ತು ಎಂದೂ ತಿಳಿಸಿದರು.
‘ಅಲೆದಾಟದ ಸ್ವಭಾವ ಆತನದು. ಆದರೆ ಯಾರಿಗೂ ತೊಂದರೆ ಮಾಡುತ್ತಿರಲಿಲ್ಲ. ನನ್ನದೇ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದು ಮೊಬೈಲ್ ಫೋನ್ ಕೊಡಿಸಿದ್ದೆ. ಅದನ್ನು ಒಡೆದು ಹಾಕಿದ್ದ. ಅಲೆದಾಡುತ್ತ ಮಂಗಳೂರಿಗೆ ಬಂದಿದ್ದ. ಅದು ಆತನ ಕೊನೆಯ ಪಯಣ ಎಂದು ಗೊತ್ತೇ ಇರಲಿಲ್ಲ’ ಎಂದು ಹೇಳಿ ಜಬ್ಬಾರ್ ಭಾವುಕರಾದರು.