ಉತ್ತರ ಕನ್ನಡ, ಜು.16: ಅಂಕೋಲಾ(Ankola) ತಾಲೂಕಿನ ಶಿರೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 6 ಜನರ ಮೃತದೇಹಗಳು ಪತ್ತೆಯಾಗಿವೆ. ಇನ್ನುಳಿದವರ ಮೃತ ದೇಹಗಳಿಗಾಗಿ ಎನ್ಡಿಆರ್ಎಫ್ (NDRF) ಶೋಧ ಕಾರ್ಯ ಮುಂದುವರೆಸಿದೆ. ಇನ್ನು ಈ ಘಟನೆಯಲ್ಲಿ ಹೆದ್ದಾರಿ ಪಕ್ಕದಲ್ಲಿ ಹೋಟೆಲ್ ಇಟ್ಟುಕೊಂಡಿದ್ದ ಒಂದೇ ಕುಟುಂಬದ ಲಕ್ಷ್ಮಣ್ ನಾಯ್ಕ್, ಪತ್ನಿ ಶಾಂತಿ, ಪುತ್ರಿ ಆವಾತಿಕಾ ಹಾಗೂ ಪುತ್ರ ರೋಷನ್(11) ಸೇರಿ ಟ್ರಕ್ ಚಾಲಕನ ಶವ ಪತ್ತೆಯಾಗಿದೆ. ಈ ನಾಲ್ವರ ಮೃತದೇಹಗಳು ಗೋಕರ್ಣ ಸಮೀಪ ಸಿಕ್ಕಿದೆ. ಇನ್ನು ಕುಮಟಾ ಸರ್ಕಾರಿ ಅಸ್ಪತ್ರೆಯ ಶವಾಗಾರದಲ್ಲಿ ಮೃತ ದೇಹ ಇಡಲಾಗಿದೆ. ಇನ್ನು ಈ ಗುಡ್ಡ ಕುಸಿತ ಸ್ಥಳದಲ್ಲಿ ಮೊದಲು ಓರ್ವ ಮಹಿಳೆ ಶವ ಪತ್ತೆಯಾಗಿತ್ತು. ಬಳಿಕ ಐದು ಜನರ ಮೃತದೇಹ ಸಿಕ್ಕಿತ್ತು. ಇದರಲ್ಲಿ ಒಂದೇ ಕುಟುಂಬದ ನಾಲ್ವರು ಮೃತರಾದರೆ, ಇನ್ನುಳಿದ ಇರ್ವರು ಯಾರು ಎಂಬುವುದು ಗುರುತು ಸಿಗುತ್ತಿಲ್ಲ. ಇದೀಗ ಕೊನೆಗೂ ದರ್ಘಟನಾ ಸ್ಥಳಕ್ಕೆ ಹಿಟಾಚಿ ಬಂದಿದ್ದು, ಮಣ್ಣು ತೆರವು ಕಾರ್ಯ ಮಾಡುತ್ತಿದೆ. ಈ ಘಟನೆ ಕುರಿತು ಪ್ರತ್ಯಕ್ಷದರ್ಶಿ ರಾಜು ಎಂಬವವರು ಮಾತನಾಡಿ, ‘ನನ್ನ ಮುಂದೆ ಕಾರಿನಲ್ಲಿ ಒಂದು ಕುಟುಂಬ ಹೋಗುತ್ತಿತ್ತು.
ಈ ವೇಳೆ ಹಠಾತ್ ಆಗಿ ಕಾರು ನಿಲ್ಲಿಸಿ ಅವರು ನಿಧಾನಕ್ಕೆ ಹಿಂದೆ ತೆಗೆದುಕೊಳ್ಳುತ್ತಿದ್ದರು. ನಾನು ಇಳಿದು ಬಂದು ನೋಡಿದಾಗ ಗುಡ್ಡ ಕುಸಿಯುತ್ತಾ ಇತ್ತು. ಕೂಡಲೇ ನಾನು ಅಲ್ಲಿಂದ ಬೇರೆ ಕಡೆ ಹಾರಿದೆ. ಸ್ವಲ್ಪದರಲ್ಲೇ ನಾನು ಸಾವಿನ ದವಡೆಯಿಂದ ಪಾರಾದೆ. ಇನ್ನು ಇಲ್ಲಿಯೇ ಒಂದು ಟೀ ಅಂಗಡಿ ಇತ್ತು. ಜೊತೆಗೆ ಅಂಗಡಿಯಲ್ಲಿ ನಾಲ್ಕು ಜನ ಇದ್ದರು. ಕಾರು ಮತ್ತು ಟೀ ಅಂಗಡಿಯಲ್ಲಿದ್ದವರು ಸೇರಿ ಸುಮಾರು ಒಂಬತ್ತು ಜನ ಮಣ್ಣಿನಡಿ ಸಿಲುಕಿದ್ದಾರೆ ಎಂದು ತಿಳಿಸಿದ್ದರು. ಇದೀಗ ಕಾರ್ಯಾಚರಣೆ ವೇಳೆ 6 ಮೃತದೇಹಗಳು ಸಿಕ್ಕಿವೆ.