ಸುಳ್ಯ ತಾಲೂಕು ಹತ್ತು ಹಲವಾರು ಸಮಸ್ಯೆಗಳನ್ನು ಮೈದುಂಬಿಕೊಂಡು ತಮ್ಮನ್ನು ಸ್ವಾಗತಿಸುತ್ತಿದೆ. ಇಂದು ಸಮಾಜದಲ್ಲಿ ಪ್ರತಿಯೊಂದು ಕಾರ್ಯಕ್ಕೂ ಆಧಾರ್ ಕಾರ್ಡ್ ಅತೀ ಮುಖ್ಯ. ಅನೇಕ ಬಡಮಕ್ಕಳ ವಿದ್ಯಾರ್ಥಿವೇತನಕ್ಕೆ, ಹಾಸ್ಟೆಲ್ ಅರ್ಜಿಗಳಿಗೆ, ಶಾಲಾ ದಾಖಲಾತಿಗಳಿಗೆ, ಬ್ಯಾಂಕ್ ಅಕೌಂಟ್ ಪ್ರಾರಂಭಕ್ಕೆ, ಪಿ.ಎಫ್ ಕ್ಲೈಮ್ ಗೆ, ಆಸ್ಪತ್ರೆ ದಾಖಲಾತಿಗೆ, ವಿಮೆ ಯೋಜನೆಗಳಿಗೆ, ಆರ್.ಟಿ.ಸಿ ಜೋಡಣೆಗೆ ಹೀಗೆ ಪ್ರತಿಯೊಂದಕ್ಕೂ ಆಧಾರವೇ ಆಧಾರ್! ಹಾಗಾದರೆ ಸುಳ್ಯದಲ್ಲಿ ಆಧಾರ್ ಹೊಂದಿರುವವರು ಇಲ್ಲ ಎಂದು ತಿಳಿಯಬೇಡಿ. ಎಲ್ಲರೂ ಆಧಾರ್ ಕಾರ್ಡ್ ಹೊಂದಿರುವವರೇ ಆದರೆ ಇಂದು ಒಂದಲ್ಲ ಒಂದು ನ್ಯೂನತೆಗಳನ್ನು ತಮ್ಮ ಆಧಾರ್ ಕಾರ್ಡ್ ಲಿ ಹೊಂದಿಲ್ಲದವರು ಇರುವುದು ಕೇವಲ ಬೆರಳೆಣಿಕೆಯಷ್ಟು.
ಇಷ್ಟೆಲ್ಲಾ ಪ್ರಸ್ತಾಪನೆ ಯಾಕೆ ಮಾಡುತ್ತೇನೆಂದರೆ ಸುಳ್ಯದಲ್ಲಿ, ತಾಲೂಕು ಕೇಂದ್ರದಲ್ಲಿ ಒಂದೇ ಒಂದು ಆಧಾರ್ ಸೆಂಟರ್ ಇಲ್ಲ. ಒಂದೆರಡು ವರ್ಷಗಳ ಹಿಂದೆ ಇತ್ತು ಆದರೂ ಎಲ್ಲಾ ತಿದ್ದುಪಡಿಗಳು ಸಾಧ್ಯವಿರಲಿಲ್ಲ. ಈಗ ಅದೂ ಇಲ್ಲವಾಗಿದೆ ಅಂದರೆ ಇಷ್ಟು ಪ್ರಮಾಣದ ಆಧಾರ್ ಕಾರ್ಡ್ ಸಮಸ್ಯೆ ಹೊಂದಿರುವವರು ಆಧಾರ್ ಕಾರ್ಡ್ ತಿದ್ದುಪಡಿಗೆ ಎಲ್ಲಿಗೆ ಹೋಗಬೇಕು? ಕೆಲವೊಂದು ಸಂಘ ಸಂಸ್ಥೆಗಳು ಜನಸಾಮಾನ್ಯರ ಕಷ್ಟ ಅರಿತು ಅಲ್ಲೊಂದು ಇಲ್ಲೊಂದು ಕ್ಯಾಂಪ್ ಏರ್ಪಡಿಸಿ ಆಧಾರ್ ತಿದ್ದುಪಡಿಗೆ ಪ್ರಯತ್ನಿಸಿದ್ದಾರೆ. ಆದರೆ ಬಹಳಷ್ಟು ಪ್ರಮಾಣದ ಜನ ತಮ್ಮ ಆಧಾರ್ ತಿದ್ದುಪಡಿಗಾಗಿ ಪಡಿಪಾಟಲು ಪಡುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಆಧಾರ್ ಸೇವಾ ಕೇಂದ್ರಗಳು ಇವೆ ಆದರೆ ಸುಳ್ಯದಲ್ಲಿ ಇಲ್ಲ ಎಂಬ ಕೊರಗನ್ನು ಹೋಗಲಾಡಿಸಿ ಶೀಘ್ರ ಪೂರ್ಣ ಪ್ರಮಾಣದ ಆಧಾರ್ ಸೇವಾ ಕೇಂದ್ರ ಸ್ಥಾಪಿಸುವರೇ ಆಧಾರ್ ತಿದ್ದುಪಡಿಗೆ ಹಾತೊರೆಯುವವರ ಪರವಾಗಿ ಈ ಬಹಿರಂಗ ಮನವಿಯ ಮುಖಾಂತರ ತಮ್ಮಲ್ಲಿ ವಿನಮ್ರ ವಿನಂತಿಸಿದ್ದಾರೆ.
