ಜುಲೈ 21: ಆನ್ಲೈನ್ನಲ್ಲಿ ಮಕ್ಕಳ ಅಶ್ಲೀಲ ದೃಶ್ಯಗಳನ್ನು (ಚೈಲ್ಡ್ ಪೋರ್ನೋಗ್ರಫಿ) ನೋಡುವುದು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 67ರ ‘ಬಿ’ ಅಧಿ ನಿಯಮ ಅನ್ವಯ ಅಪರಾಧವಲ್ಲವೆಂದು ಜುಲೈ 10ರಂದು ನೀಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಹಿಂಪಡೆದಿದೆ.
ಅಲ್ಲದೆ, ಸ್ವತಃ ನ್ಯಾಯಮೂರ್ತಿಗಳೇ ಆದೇಶ ನೀಡುವಾಗ ತಪ್ಪಾಗಿದೆ, ಹಾಗಾಗಿ ಅದನ್ನು ವಾಪಸ್ ಪಡೆದು ಹೊಸ ಆದೇಶ ಹೊರಡಿಸಿರುವುದಾಗಿ ಹೇಳಿದ್ದಾರೆ.
ನ್ಯಾಯಾಲಯವು ಐಟಿ ಕಾಯಿದೆ ಸೆಕ್ಷನ್ 67 (ಬಿ) (ಬಿ)ಯನ್ನು ಪರಿಶೀಲಿಸದೆ ಈ ಆದೇಶ ನೀಡಿತ್ತು. ಹಾಗಾಗಿ, ಹಿಂದಿನ ಆದೇಶ ವಾಪಸ್ ಪಡೆದು ಹೊಸ ಅದೇಶ ಹೊರಡಿಸಿರುವುದಲ್ಲದೆ, ಅರ್ಜಿದಾರರ ವಿರುದ್ಧ ತನಿಖೆ ಮುಂದುವರಿಸಲು ಸೂಚಿಸಿದೆ. ನ್ಯಾಯಾಲಯ “ನ್ಯಾಯಮೂರ್ತಿಗಳು ಕೂಡ ಮನುಷ್ಯರೇ. ಹೀಗಾಗಿ, ಸಹಜವಾಗಿ ಕೆಲವೊಮ್ಮೆ ತಪ್ಪುಗಳಾಗುತ್ತವೆ. ತಪ್ಪು ಮಾಡದಿರುವುದು ಮಾನವೀಯತೆಗೆ ತಿಳಿದಿಲ್ಲ. ನ್ಯಾಯಮೂರ್ತಿಗಳೂ ಸಹ ದೋಷರಹಿತರಲ್ಲ. ದೋಷವು ನಾವು ನಿರ್ವಹಿಸುವ ಕಾರ್ಯಗಳಿಗೆ ಹೋಲುತ್ತದೆ. ಆದ್ದರಿಂದ ಈ ನ್ಯಾಯಾಲಯ ನೀಡಿದ ಆದೇಶದಲ್ಲಿ ತಪ್ಪಾಗಿದೆ ಎಂಬುದನ್ನು ತಿಳಿದ ನಂತರ ಆ ತಪ್ಪನ್ನು ಮುಂದುವರಿಸುವುದು ನಾಯಕತ್ವವಲ್ಲ” ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಆದೇಶದಲ್ಲಿ ಹೇಳಿದೆ. ಅಲ್ಲದೆ, ಪ್ರಕರಣ ರದ್ದುಗೊಳಿಸಿದ್ದ ಹಿಂದಿನ ಆದೇಶ ಮಾರ್ಪಾಡು ಮಾಡಿ ಪ್ರಕರಣದಲ್ಲಿ ತನಿಖೆಯನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿದೆ.
ಆದೇಶ ಮರುಪರಿಶೀಲನೆ: ಸರ್ಕಾರಿ ವಕೀಲರು ಸಲ್ಲಿಸಿದ್ದ ಆದೇಶ ಮರುಪರಿಶೀಲನೆ ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು “ಮೊದಲು ಕೇವಲ ಐಟಿ ಕಾಯಿದೆಯ ಸೆಕ್ಷನ್ 67ರ ‘ಬಿ’ (ಎ) ಅಡಿ ಆದೇಶ ಹೊರಡಿಸಲಾಗಿತ್ತು. ಆದರೆ ಸೆಕ್ಷನ್ 67 (ಬಿ) (ಬಿ)ಯಲ್ಲಿ ಮಕ್ಕಳನ್ನು ಅಶ್ಲೀಲವಾಗಿ ಚಿತ್ರಿಸುವ ಮತ್ತು ತೋರಿಸುವ ದೃಶ್ಯಗಳನ್ನು ಡಿಜಿಟಲ್ ರೂಪದಲ್ಲಿ ಹೊಂದುವುದು, ಸಂಗ್ರಹ ಮಾಡುವುದು, ಬ್ರೌಸ್ ಮಾಡುವುದು ಮತ್ತು ಪ್ರದರ್ಶಿಸುವುದು ಮತ್ತು ವಿತರಣೆ ಮಾಡುವುದು ಅಪರಾಧವಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ಸೆಕ್ಷನ್ 67 (ಬಿ) (ಬಿ) ಅನ್ವಯವಾಗುತ್ತದೆ” ಎಂದು ಆದೇಶಿಸಿದೆ.
ಇದೇ ವೇಳೆ ಅರ್ಜಿದಾರರ ಪರ ವಕೀಲರು, ಒಮ್ಮೆ ಆದೇಶವನ್ನು ಹೊರಡಿಸಿದ ನಂತರ ನ್ಯಾಯಾಲಯ ಆ ಆದೇಶವನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ. ಸಿಆರ್ಪಿಸಿ ಸೆಕ್ಷನ್ 362ರಡಿ ಆದೇಶ ಮರುಪರಿಶೀಲನೆಗೆ ನಿರ್ಬಂಧವಿದೆ ಎಂದು ಆಕ್ಷೇಪ ಎತ್ತಿದ್ದರು. ಆದರೆ ಅದನ್ನು ನ್ಯಾಯಾಲಯ ತಳ್ಳಿ ಹಾಕಿ ನ್ಯಾಯಾಲಯಕ್ಕೆ ತನ್ನದೇ ಆದೇಶವನ್ನು ಮಾರ್ಪಾಡು ಮಾಡುವ ಅಧಿಕಾರವಿದೆ ಎಂದು ಪರಿಷ್ಕೃತ ಆದೇಶವನ್ನು ಹೊರಡಿಸಿ ನ್ಯಾಯಮೂರ್ತಿಗಳು ತಮ್ಮಿಂದ ತಪ್ಪಾಗಿದೆ, ಅದನ್ನು ತಿದ್ದಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ: 2022ರ ಮಾರ್ಚ್ 23ರಂದು ಮಧ್ಯಾಹ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಎನ್. ಇನಾಯತ್ವುಲ್ಲಾ ವೆಬ್ಸೈಟ್ನಲ್ಲಿ ಮಕ್ಕಳ ಅಶ್ಲೀಲ ದೃಶ್ಯಗಳನ್ನು ನೋಡುತ್ತಿದ್ದರು ಎಂದು ಘಟನೆ ನಡೆದ ಎರಡು ತಿಂಗಳ ಬಳಿಕ ಅಂದರೆ 2023ರ ಮೇ 3ರಂದು ಸೆನ್ ಪೊಲೀಸ್ ಠಾಣೆಯಲ್ಲಿದೂರು ದಾಖಲಾಗಿತ್ತು. ಅದು ಐಟಿ ಕಾಯಿದೆ 67ರ ಸೆಕ್ಷನ್ ‘ಬಿ’ ಪ್ರಕಾರ ಅಪರಾಧವೆಂದು ಆರೋಪಿಸಲಾಗಿತ್ತು. ಅರ್ಜಿದಾರರು ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.
ಆರೋಪಿ ಇನಾಯತ್ವುಲ್ಲಾ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, “ಅರ್ಜಿದಾರರ ವಿರುದ್ಧ ಆನ್ಲೈನ್ನಲ್ಲಿ ಮಕ್ಕಳ ಅಶ್ಲೀಲ ದೃಶ್ಯಗಳನ್ನು ನೋಡುತ್ತಿದ್ದರೆಂಬ ಆರೋಪವಿದೆ. ಅದು ಅಶ್ಲೀಲ ದೃಶ್ಯಗಳನ್ನು ಪ್ರಸಾರ ಮಾಡುವುದು ಅಥವಾ ಬೇರೆಯವರಿಗೆ ಕಳುಹಿಸಿದಂತಾಗುವುದಿಲ್ಲ. ಹಾಗಾಗಿ, ಅದು ಐಟಿ ಕಾಯಿದೆ ಸೆಕ್ಷನ್ 67ರ ‘ಬಿ’ ವ್ಯಾಪ್ತಿಗೆ ಒಳಪಡುವುದಿಲ್ಲ, ಅಪರಾಧವೂ ಆಗುವುದಿಲ್ಲ” ಎಂದು ಆದೇಶಿಸಿತ್ತು. ಅಲ್ಲದೆ, ಇನಾಯತ್ವುಲ್ಲಾ ವಿರುದ್ಧದ ಪ್ರಕರಣವನ್ನು ರದ್ದು ಮಾಡಿತ್ತು. ಅರ್ಜಿದಾರರು ಬಹುಶಃ ಅಶ್ಲೀಲ ದೃಶ್ಯಗಳನ್ನು ನೋಡುವ ಚಟಕ್ಕೆ ದಾಸರಾಗಿರಬಹುದು. ಹಾಗಾಗಿ, ಅವರು ಅದನ್ನು ನೋಡಿದ್ದಾರೆನಿಸುತ್ತದೆ. ಅದು ಬಿಟ್ಟರೆ ಅವರ ವಿರುದ್ಧ ಬೇರೆ ಆರೋಪಗಳು ಇಲ್ಲ. ಅದಕ್ಕೆ ಸಾಕ್ಷ್ಯವೂ ಇಲ್ಲ. ಹಾಗಾಗಿ, ಅವರ ವಿರುದ್ಧದ ಕ್ರಿಮಿನಲ್ ಪ್ರಕರಣ ಮುಂದುವರಿಸಲಾಗದು. ಒಂದು ವೇಳೆ ಮುಂದುವರಿಸಿದರೆ ಅದು ಕಾನೂನಿನ ದುರ್ಬಳಕೆಯಾಗಲಿದೆ” ಎಂದು ನ್ಯಾಯಾಲಯ ಅರ್ಜಿಯನ್ನು ಮಾನ್ಯ ಮಾಡಿತ್ತು.